ಮಡಿಕೇರಿ, ಫೆ. 20: ಕೆಲ ದಿನಗಳ ಹಿಂದೆ ಸಿದ್ದಾಪುರ ವ್ಯಾಪ್ತಿಯ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಸಂಧ್ಯಾ ಎಂಬ ಅಮಾಯಕ ವಿದ್ಯಾರ್ಥಿನಿಯ ಬರ್ಭರ ಹತ್ಯೆ ಮನಕಲಕುವಂಥದ್ದು ಎಂದು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲೆಯ ವಿವಿಧ ಬೆಳೆಗಾರ ಸಂಘಟನೆಗಳ ಪ್ರಮುಖರು, ಸಂಧ್ಯಾ ನಿಧನಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಕರಣದಲ್ಲಿ ಅಪರಾಧಿಗಳಾಗಿರುವ ಪಶ್ಚಿಮಬಂಗಾಳ ಮೂಲದ ದುರಳರನ್ನು ನ್ಯಾಯಾಲಯವು ಕಠಿಣ ಶಿಕ್ಷೆಗೆ ಒಳಪಡಿಸುವಂತೆಯೂ ಬೆಳೆಗಾರರ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥಮಲ್ಲೇಶ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಜಿ. ರಾಜೀವ್, ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ, ಸೋಮವಾರಪೇಟೆ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ದಿನೇಶ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಸಂಧ್ಯಾ ಪ್ರಕರಣವನ್ನೇ ಮುಂದಿಟ್ಟುಕೊಂಡು ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಯನ್ನು ಬೆಳೆಗಾರರ ಸಂಘಟನೆಗಳು ಖಂಡಿಸಿರುವದಾಗಿ ತಿಳಿಸಿದ್ದಾರೆ.

ಅಸ್ಸಾಮ್‍ನಿಂದ ಬಂದ ಅಸಾಹಯಕ ಕಾರ್ಮಿಕರನ್ನು ಸಿದ್ದಾಪುರದಲ್ಲಿ ಮನಬಂದಂತೆ ಥಳಿಸುತ್ತಿರುವದೂ ವಿಷಾಧನೀಯ. ಕೊಡಗು ದೇಶದಲ್ಲಿಯೇ ಕಾಫಿ ಬೆಳೆಗೆ ಹೆಸರುವಾಸಿಯಾದ ಜಿಲ್ಲೆಯಾಗಿದ್ದು, ಕಾಫಿ ತೋಟಗಳಲ್ಲಿ ವರ್ಷದ ಎಲ್ಲಾ ದಿನಗಳಲ್ಲಿಯೂ ಕಾರ್ಮಿಕರಿಗೆ ಬೆಳೆಗಾರರು ಕೆಲಸ ನೀಡುತ್ತಿದ್ದಾರೆ. ಕೊಡಗಿನಲ್ಲಿ ನೆಲಸಿರುವ ಕಾರ್ಮಿಕರು ಇಂದಿನ ಕೆಲಸದ ದಿನಗಳ ಅಗತ್ಯಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆಯೂ ಶ್ರೀಲಂಕಾ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಂದ ಕಾರ್ಮಿಕರು ಕೊಡಗಿಗೆ ಕೆಲಸಕ್ಕಾಗಿ ಬಂದಿದ್ದರು ಎಂಬದು ಸ್ಮರಣೀಯ.

ಹೀಗಾಗಿ, ಕಾಫಿ ಕುಯ್ಲು ಸೇರಿದಂತೆ ಕೆಲವೊಂದು ಪ್ರಮುಖ ತೋಟ ಕೆಲಸಗಳ ದಿನಗಳಲ್ಲಿ ಹೆಚ್ಚುವರಿ ಕಾರ್ಮಿಕರ ಅಗತ್ಯಕ್ಕನುಗುಣವಾಗಿ ಕೊಡಗಿನ ಕಾಫಿ ಬೆಳೆಗಾರರು ಹೊರಗಿನಿಂದ ಬರುವ ಕಾರ್ಮಿಕರನ್ನು ಅವಲಂಭಿಸಬೇಕಾದ ಅನಿವಾರ್ಯತೆಯಿದೆ.

ಯಾರೋ ಕೆಲವು ಕಾರ್ಮಿಕರು ಮಾಡಿರುವ ದುಷ್ಕøತ್ಯಕ್ಕೆ ವಲಸಿಗರಾಗಿ ಕೊಡಗಿಗೆ ಕೆಲಸಕ್ಕೆಂದು ಬಂದಿರುವ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಇಡೀ ಕಾರ್ಮಿಕ ವರ್ಗವನ್ನೇ ದೂಷಿಸುತ್ತಾ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವದನ್ನೂ ಬೆಳೆಗಾರರ ಸಂಘಟನೆಗಳು ಖಂಡಿಸಿವೆ.

ಕೆಲವೇ ಕೆಲವು ಸ್ವಹಿತಾಸಕ್ತಿಯ ದುಷ್ಟಕೂಟಗಳು ಈ ರೀತಿ ಅಮಾಯಕ ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವದರ ವಿರುದ್ಧ ಪೆÇಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಹಲ್ಲೆಕೋರರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ.

ಸಮಾಜದ ಎಲ್ಲಾ ರಂಗಗಳಲ್ಲಿಯೂ ದುಷ್ಕøತ್ಯಗಳು ಸಂಭವಿಸುತ್ತಲೇ ಇರುತ್ತದೆ. ಈ ಪೈಕಿ ಕಾರ್ಮಿಕ ರಂಗವು ಕೂಡ ಒಂದಾಗಿದೆ. ಕಾರ್ಮಿಕರೇ ಆಗಲಿ, ಬೆಳೆಗಾರರೇ ಆಗಲೀ, ಕೊಡಗಿನಲ್ಲಿ ಹಲವಾರು ವರ್ಷಗಳಿಂದ ನೆಲಸಿರುವ ವಿವಿಧ ಜಾತಿ, ಧರ್ಮಗಳ ವ್ಯಕ್ತಿಗಳೇ ಆಗಿರಲಿ, ಯಾರೇ ಆಗಿದ್ದರೂ ಅಪರಾಧದಲ್ಲಿ ಭಾಗಿಯಾದ ಕ್ಷಣ ಆ ವರ್ಗಕ್ಕೆ ಸೇರಿದವರೆಲ್ಲಾ ಅಪರಾಧಿಗಳೆಂದು ಭಾವಿಸುವದು ಸರಿಯಲ್ಲ.

ಹೊರಗಿನಿಂದ ಕೊಡಗಿಗೆ ಕೂಲಿಕೆಲಸಕ್ಕೆಂದು ಬರುವ ಕಾರ್ಮಿಕ ವರ್ಗದವರ ಮಾಹಿತಿಯನ್ನು ಪೆÇಲೀಸ್ ಇಲಾಖೆಗೆ ಮೊದಲೇ ನೀಡುವದು ಎಲ್ಲಾ ರೀತಿಯಲ್ಲಿಯೂ ಸೂಕ್ತ. ಇದು ಬಿಟ್ಟು ಯಾರೋ ಮಾಡಿದ ದುಷ್ಕøತ್ಯಕ್ಕೆ ಅಮಾಯಕರ ಮೇಲೆ ಹಲ್ಲೆ ಮಾಡುವದನ್ನು ಬೆಳೆಗಾರರ ಸಂಘಟನೆಗಳು ಒಮ್ಮತದಿಂದ ಖಂಡಿಸಿವೆ. ಅಮಾಯಕ ಕಾರ್ಮಿಕರ ಮೇಲೆ ಹಲ್ಲೆಯಂಥ ಘಟನೆಗಳು ಮುಂದುವರೆದದ್ದೇ ಆದಲ್ಲಿ ಬೆಳೆಗಾರರು ಪ್ರತಿಭಟನೆಯ ಹಾದಿ ಹಿಡಿಯಬೇಕಾದೀತು ಎಂದೂ ಪ್ರಕಟಣೆಯಲ್ಲಿ ಬೆಳೆಗಾರರ ಸಂಘಟನೆಗಳು ಎಚ್ಚರಿಸಿವೆ.