ವೀರಾಜಪೇಟೆ, ಫೆ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದು ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ಹೂಡಿದ್ದಾರೆ. ಅಧಿಕಾರಿಗಳು ಬಲತ್ಕಾರವಾಗಿ ವ್ಯಾಪಾರಿಗಳನ್ನು ತೆರವು ಗೊಳಿಸಲು ಮುಂದಾದರೆ ತಾ. 27 ರಂದು ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಪಂಚಾಯಿತಿ ಕಚೇರಿ ಎದುರು ಧರಣಿ ಮುಷ್ಕರ ಹೂಡಲಾಗುವದು ಎಂದು ಬೀದಿ ವ್ಯಾಪಾರಿಗಳ ಸಂಘಟನೆ ಪರ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ ಪ್ರಥ್ವಿನಾಥ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡು ಬಡವರು, ಆರ್ಥಿಕವಾಗಿ ಹಿಂದುಳಿದವರು, ನಿರ್ಗತಿಕರಿಗೆ ಸರ್ವೊಚ್ಚ ನ್ಯಾಯಾಲಯ ಕಾನೂನು ಬದ್ಧವಾಗಿ ಮೊಬೈಲ್ ಬೀದಿ ಬದಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದೆ. ನ್ಯಾಯಾಲಯ ಹಾಗೂ ಸರಕಾರ ಅದೇ ರೀತಿಯಲ್ಲಿ ವ್ಯಾಪಾರಸ್ಥರಿಗೆ ಪಂಚಾಯಿತಿ ವತಿಯಿಂದಲೇ ಪರವಾನಗಿಯ ವ್ಯಾಪಾರಸ್ಥರ ಗುರುತಿನ ಚೀಟಿಯನ್ನು ನೀಡಲಾಗಿದೆ. ನಿನ್ನೆ ದಿನ ರಾತ್ರಿ ಪಟ್ಟಣ ಪಂಚಾಯಿತಿ ರೆವಿನ್ಯೂ ಇನ್ಸ್‍ಪೆಕ್ಟರ್ ಬೀದಿ ಬದಿ ವ್ಯಾಪಾರಿಗಳಿಗೆ ನಿಂದಿಸಿ ಅವರ ವ್ಯಾಪಾರಕ್ಕೆ ಬಳಸುವ ಸಾಮಾನು ಸರಂಜಾಮುಗಳನ್ನು ತಂದು ಕಚೇರಿಯಲ್ಲಿ ಇರಿಸಿದ್ದಾರೆ.

ಬೀದಿ ಬದಿಯಲ್ಲಿ ಅನೇಕ ತಿಂಗಳುಗಳಿಂದ ಸಂಚಾರಿ ಕೈಗಾಡಿಯಲ್ಲಿ ವಡೆ ಬೋಂಡ ಮಾಡುತ್ತಿದ್ದ ಪುಟ್ಟಮ್ಮ ಎಂಬಾಕೆ ಮಾಡಿಟ್ಟಿದ್ದ ತಿಂಡಿ ತಿನಿಸುಗಳನ್ನು ರಸ್ತೆಗೆ ಬಿಸಾಕಿ ದರ್ಪ ಮೆರೆದಿದ್ದಾರೆ. ಈ ಸಂಬಂಧದಲ್ಲಿ ಪಂಚಾಯಿತಿಯ ಆಡಳಿತಧಿಕಾರಿ ತಹಶೀಲ್ದಾರರನ್ನು ಸಂಪರ್ಕಿಸಿದರೆ ಅವರಿಗೆ ವಿಚಾರವೇ ತಿಳಿದಿಲ್ಲ. ಮುಖ್ಯಾಧಿಕಾರಿಗಳು ನೀಡಿದ ಮೌಖಿಕ ಆದೇಶದಿಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಈ ಕುರಿತು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾಧಿಕಾರಿಯವರಿಗೂ ದೂರು ನೀಡಲಾಗಿದೆ ಎಂದರು. ಗೋಷ್ಠಿಯಲ್ಲಿ ವ್ಯಾಪಾರಿಗಳಾದ ಹಬೀಬ್, ಮ್ಯೆಲಾರಿ, ಉಬೇದುಲ್ಲಾ, ಇದಾಯತ್, ಪುಟ್ಟಮ್ಮ, ಉಮೇಶ್ ಉಪಸ್ಥಿತರಿದ್ದರು.