ಗೋಣಿಕೊಪ್ಪ ವರದಿ, ಫೆ. 20: ಹುದಿಕೇರಿಯಲ್ಲಿ ಸರ್ಕಾರಿ ಜಾಗದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಮೂಲಭೂತ ಸೌಕರ್ಯದೊಂದಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಹುದಿಕೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹೆಚ್. ಎಸ್. ಕೃಷ್ಣಪ್ಪ ಎಚ್ಚರಿಸಿದ್ದಾರೆ.

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಒ ಹೆಸರಿನಲ್ಲಿರುವ 8 ಎಕರೆ ಜಾಗದಲ್ಲಿ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ. ಆದರೆ, ಸರ್ಕಾರ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸದೆ ಇರುವದರಿಂದ ತೊಂದರೆಯಾಗಿದೆ. ಶೀಘ್ರವಾಗಿ ಇವರಿಗೆ ಮೂಲಭೂತ ಸೌಲಭ್ಯ ದೊಂದಿಗೆ ನಿವೇಶನ ಹಂಚಿಕೆ ಮಾಡ ಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹುದಿಕೇರಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಜಾಗವನ್ನು ನಿರಾಶ್ರಿತರಿಗೆ ನೀಡಬೇಕು ಎಂದು ಕಾಯ್ದಿರಿಸಿದ್ದರೂ, ನಿಯಮ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ಈ ಜಾಗ ಅತಿಕ್ರಮಣಗೊಂಡಿದೆ. ಇದಕ್ಕೆ ಪಿಡಿಒ ಕೂಡ ಹೊಣೆಗಾರರಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, 74 ಕುಟುಂಬಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚಿರುವ ಕಾರಣ ಶೌಚಗೃಹ, ಕುಡಿಯುವ ನೀರು ಸಮಸ್ಯೆ ಕಾಡುತ್ತಿದೆ. ಸರ್ಕಾರ ಇವರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಚಾಲಕರುಗಳಾದ ಸಿಂಗಿ ಸತೀಶ್, ಕರ್ಕು, ಗಣೇಶ್ ಉಪಸ್ಥಿತರಿದ್ದರು.