ಮಡಿಕೇರಿ, ಫೆ. 20: ಶಾಂತಿ ಪ್ರಧಾನ ಜಿಲ್ಲೆ ಕೊಡಗಿನ ತೋಟಗಳಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ವಲಸೆ ಕಾರ್ಮಿಕರಿಂದಾಗಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತಿದ್ದು, ತಕ್ಷಣ ಹೊರ ರಾಜ್ಯಗಳ ಗಡಿಪಾರಿಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾರ್ಯದರ್ಶಿ ಕೆ.ಕೆ. ಗಣೇಶ್ ಹಾಗೂ ಖಜಾಂಚಿ ಕೆ.ಎಂ. ಮೋಹನ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು ಸಿದ್ದಾಪುರ ಸಮೀಪ ವಲಸೆ ಕಾರ್ಮಿಕರಿಂದ ನಡೆದ ವಿದ್ಯಾರ್ಥಿನಿಯ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿದ್ದಾರೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಕೂಲಿಯನ್ನು ಅರಸಿಕೊಂಡು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದರೆ ಹೊಟ್ಟೆಪಾಡಿಗಾಗಿ ಬರುವ ಅಪರಿಚಿತ ಕಾರ್ಮಿಕರು ಇಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.