ವೀರಾಜಪೇಟೆ, ಫೆ. 20: ಯಾವದೇ ಪರವಾನಿಗೆ ಇಲ್ಲದೆ ಅಂತರ ರಾಜ್ಯ ಕೇರಳದಿಂದ ಕಟ್ಟಡ ಸಾಮಗ್ರಿಗಳನ್ನು ಪಟ್ಟಣದಾದ್ಯಂತ ಸರಬರಾಜು ಮಾಡುತ್ತಿದ್ದು ಇದರಿಂದ ಇಲ್ಲಿನ ಕೂಲಿ ಕಾರ್ಮಿಕರು ಹಾಗೂ ಲಾರಿ ಮಾಲೀಕರು ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ ಎಂದು ಲಾರಿ ಮಾಲೀಕರ ಪರವಾಗಿ ಅಂಜಪರವಂಡ ಅನಿಲ್ ಮಂದಣ್ಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ರಾಜ್ಯವಾದ ಕೇರಳದಿಂದ ಜೆಲ್ಲಿ, ಎಂ ಸ್ಯಾಂಡ್, ಜೆಲ್ಲಿ ಪುಡಿ, ಜೆಲ್ಲಿ ಚಿಪ್ಸ್, ಸಿಮೆಂಟ್ ಇಟ್ಟಿಗೆಗಳು ಯಾವದೇ ಅನುಮತಿ ಪಡೆಯದೆ ಅನಧಿಕೃತವಾಗಿ ಪಟ್ಟಣಕ್ಕೆ ಬರುತ್ತಿದೆ. ವೀರಾಜಪೇಟೆ ತಾಲೂಕಿನಾದ್ಯಂತ 45ಕ್ಕೂ ಅಧಿಕ ಲಾರಿಗಳಿಗೆ ಕಟ್ಟಡ ಸಾಮಗ್ರಿಗಳನ್ನು ಕೇರಳದಿಂದ ವೀರಾಜಪೇಟೆ ತಾಲೂಕಿಗೆ ಸರಬರಾಜು ಮಾಡುವ ಕಾಯಕವಾಗಿದ್ದು ಇದನ್ನು ಇಲಾಖೆ ಕಾನೂನುಬದ್ಧವಾಗಿ ನಿರ್ಬಂಧಿಸಬೇಕು. ಮಾನವೀಯತೆಯ ದೃಷ್ಟಿಯಿಂದ ವಾಹನ ಮಾಲೀಕರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದು ಕೊಂಡು ಲಾರಿಗಳನ್ನು ಖರೀದಿಸಿ ಕೆಲಸವಿಲ್ಲದೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಕೇರಳದಿಂದ ಯಾವದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಕಟ್ಟಡ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿರುವ ಲಾರಿಗಳನ್ನು ಚೆಕ್‍ಪೋಸ್ಟ್‍ನಲ್ಲಿ ಸೂಕ್ತ ತಪಾಸಣೆ ನಡೆಸಿ ಇಂತಹ ಲಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸಿತು.

ಗೋಷ್ಠಿಯಲ್ಲಿ ಲಾರಿ ಮಾಲೀಕರಾದ ಮಹಮದ್ ರಾಫಿ, ಪೊನ್ನಕಚ್ಚಿರ ಸುಭಾಶ್, ಪಟ್ಟಡ ರಂಜಿ ಪೂಣಚ್ಚ, ಸುಮನ್, ಪುನಿತ್, ರಿಜ್ವಾನ್ ಉಪಸ್ಥಿತರಿದ್ದರು.