ಕುಶಾಲನಗರ, ಫೆ. 19: ಜಲಮೂಲಗಳನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಕರೆ ನೀಡಿದ್ದಾರೆ.
ಸಮೀಪದ ಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್‍ನ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ‘ನದಿ ಸ್ವಚ್ಛತೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ, ಸ್ವಚ್ಛವಾಗಿ ಹರಿಯುವ ನದಿಯನ್ನು ಕಲುಷಿತಗೊಳಿಸದೆ ಸಂರಕ್ಷಿಸಬೇಕು. ಬೇಸಿಗೆ ಅವಧಿಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಸೃಷ್ಠಿಯಾಗುವದರೊಂದಿಗೆ ಮುಂದಿನ ದಿನಗಳಲ್ಲಿ ಭಾರೀ ಆತಂಕ ಎದುರಾಗಲಿದೆ. ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ವಿಭಾಗದ ಉಪನ್ಯಾಸಕ ರೂಪಕುಮಾರ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ವೃದ್ಧಿಸುತ್ತದೆ. ಶಿಬಿರದಲ್ಲಿ ಪಡೆದುಕೊಂಡ ಅನುಭವಗಳು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ಸಾಮರಸ್ಯದ ಜೀವನ ನಡೆಸುವಲ್ಲಿ ಪ್ರೇರಪಣೆಯಾಗಲಿದೆ ಎಂದರು.
ಉಪನ್ಯಾಸಕ ಜಡೆಸ್ವಾಮಿ ಮಾತನಾಡಿ, ಪ್ರಸ್ತುತ ನೀರಿನ ಸಮಸ್ಯೆ ಉಲ್ಭಣವಾಗುತ್ತಿದ್ದು ಸಮರ್ಪಕ ನೀರಿನ ನಿರ್ವಹಣೆ ಬಗ್ಗೆ ಎಲ್ಲರೂ ಅರಿತುಕೊಳ್ಳುವದು ಅವಶ್ಯಕ. ಈ ಮೂಲಕ ಜೀವಜಲವನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಿ ಸಂರಕ್ಷಣೆ ಮಾಡಬೇಕಿದೆ ಎಂದರು.
ಉಪನ್ಯಾಸಕರುಗಳಾದ ಕೆ.ಪಿ. ವಿನಯ್, ಎಂ.ಎ. ಪ್ರದೀಪ್ ಶಿಬಿರಕ್ಕೆ ಶುಭ ಕೋರಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್, ಶಿಬಿರಾಧಿಕಾರಿಗಳಾದ ಅಸ್ಮತ್, ಮಂಜುನಾಥ್ ಇದ್ದರು.
ಶಿಬಿರದ ಅಂಗವಾಗಿ ಕುಶಾಲ ನಗರದ ಪ್ರೈಮ್ ಆಸ್ಪತ್ರೆ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು. ಶಿಬಿರಾರ್ಥಿ ಗಳಿಂದ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ತಡೆ ಬಗ್ಗೆ ಜಾಗೃತಿ ಜಾಥಾ ನಡೆಯಿತು.
ಶಿಬಿರಾರ್ಥಿಗಳಾದ ರಾಹುಲ್ ಪ್ರಾರ್ಥಿಸಿದರು, ಗಿರಿಧರ್ ಸ್ವಾಗತಿಸಿದರು, ಹೇಮಂತ್ ವಂದಿಸಿದರು.