ಮಡಿಕೇರಿ, ಫೆ. 19: ಕರ್ನಾಟಕ ರಾಜ್ಯ ಸರ್ಕಾರದ ಸಾಲ ಮನ್ನಾ ಯೊಜನೆ-2018 ರಡಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‍ನಿಂದ ಅಲ್ಪಾವಧಿ ಬೆಳೆ ಸಾಲ ಪಡೆದು ಜುಲೈ 10 ಕ್ಕೆ ಬಾಕಿ ಉಳಿಸಿಕೊಂಡ ಫಲಾನುಭವಿ ರೈತ ಕುಟುಂಬಕ್ಕೆ ರೂ. 1 ಲಕ್ಷವರೆಗಿನ ಸಾಲ ಮನ್ನಾ ಸೌಲಭ್ಯವನ್ನು ಘೋಷಿಸಿದೆ.

ಈ ನಿಟ್ಟಿನಲ್ಲಿ ರೈತ ಸದಸ್ಯರು ಸ್ವಯಂ ಘೋಷಣಾ ಪತ್ರದೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಆರ್‍ಟಿಸಿ ದಾಖಲಾತಿಗಳ ಪ್ರತಿಯನ್ನು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಲ್ಲಿಸುವಂತೆ ತಿಳಿಸಿದ್ದರೂ ಕೂಡ, ಕೆಲವು ರೈತರು ಸ್ವಯಂ ಘೋಷಿತ ಪತ್ರ ಮತ್ತು ದಾಖಲಾತಿಗಳನ್ನು ಸಲ್ಲಿಸದೇ ಇರುವದು ಕಂಡುಬಂದಿದೆ.

ಸಲ್ಲಿಸಬೇಕಾದ ಸ್ವಯಂ ಘೋಷಣಾ ಪತ್ರದಲ್ಲಿ ನಮೂದಿಸಿದ ಆಧಾರ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ, ಮತ್ತು ಆರ್‍ಟಿಸಿ ಸರ್ವೆ ನಂಬರ್‍ಗಳನ್ನು ಸರ್ಕಾರ ನಿಗದಿಪಡಿಸಿರುವ ಆನ್‍ಲೈನ್ ತಂತ್ರಾಂಶದಲ್ಲಿ ಅಳವಡಿಸಿ ಸಾಲದ ದಾಖಲಾತಿಯೊಂದಿಗೆ ತಾಳೆ ಮಾಡಬೇಕಾಗಿದೆ.

ಆದ್ದರಿಂದ ಎಲ್ಲಾ ರೈತ ಸದಸ್ಯ ಫಲಾನುಭವಿಗಳು ಎರಡು ದಿನದಲ್ಲಿ ತಮ್ಮ ವ್ಯಾಪ್ತಿಗೆ ಬರುವ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿಯವರಿಗೆ ಸಲ್ಲಿಸುವಂತೆ ಪ್ರಕಟಣೆ ಕೋರಿದೆ.