ಕಂಪ್ಯೂಟರ್ ಯುಗದಲ್ಲಿ ಇಂಗ್ಲೀಷ್ ಭಾಷೆ ಅನಿವಾರ್ಯ : ಶಾಸಕ ರಂಜನ್

ಹೆಬ್ಬಾಲೆ, ಫೆ. 19: ಇಂದಿನ ಕಂಪ್ಯೂಟರ್ ಯುಗದಲ್ಲಿ ಬದುಕಿನ ಭಾಷೆಯಾಗಿ ಇಂಗ್ಲೀಷ್ ಅನಿವಾರ್ಯ ವಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ಹೆಬ್ಬಾಲೆ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಅಭಿವೃದ್ಧಿಗೆ ಶಾಸಕರ ಅನುದಾನದಿಂದ ರೂ. 5 ಲಕ್ಷ ಅನುದಾನ ಒದಗಿಸುವದಾಗಿ ಹೇಳಿದರು. ಸಮಾಜದಲ್ಲಿ ಗುರು ಹಿರಿಯರು ಹಾಗೂ ತಂದೆ-ತಾಯಿಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಅವರಿಗೆ ಗೌರವವನ್ನು ನೀಡುವ ಮೂಲಕ ಪ್ರೀತಿಯಿಂದ ಕಾಣುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಸಂಸ್ಕøತ ವಿಶ್ವವಿದ್ಯಾನಿಲಯದ ಉಪಕುಲಪತಿ ಪದ್ಮಾಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಇರಬಾರದು. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವಿದ್ಯೆ, ಭಾಷೆಯನ್ನು ಕಲಿಸುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಿದ ಗುರುಗಳ ಕಾಯಕ ಶ್ರೇಷ್ಠ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಇ.ಕೆ. ಸುಬ್ರಾಯ ಬನಶಂಕರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಮಾನಗಳಿಸಿರುವ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ದಿವ್ಯಾ ಸಾನ್ನಿಧ್ಯ ವಹಿಸಿ ಮಾತನಾಡಿ, ಮೂಲಭೂತ ಸೌಲಭ್ಯ ವಂಚಿತ ಗಡಿ ಗ್ರಾಮಗಳಲ್ಲಿ ವಿದ್ಯಾಭಿಮಾನಿಗಳು ಆರಂಭಿಸಿದ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿರುವದು ಹೆಮ್ಮೆಯ ವಿಚಾರವಾಗಿದೆ ಎಂದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ಹೆಚ್.ಎಲ್. ವೆಂಕಟೇಶ್ ಹಳೆಯ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು. ಗುರುವಂದನಾ ಆಚರಣಾ ಸಮಿತಿ ಅಧ್ಯಕ್ಷ ಹೆಚ್.ವಿ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಆರ್. ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಗ್ರಾ.ಪಂ. ಅಧ್ಯಕ್ಷೆ ಲತಾ ಸತೀಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಲ್. ರಮೇಶ್, ಸಂಸ್ಥೆ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ, ಮುಖ್ಯ ಶಿಕ್ಷಕ ಹೆಚ್.ಎಸ್. ಗಣೇಶ್, ಸಮಿತಿ ಸದಸ್ಯರಾದ ಹೆಚ್.ಎಸ್. ರಾಮಶೆಟ್ಟಿ, ಹೆಚ್.ಎನ್. ಸುಬ್ರಮಣ್ಯ, ಎಂ.ಎನ್. ಮೂರ್ತಿ, ಕೆ.ವಿ. ಉಮೇಶ್, ಹೆಚ್.ಎಸ್. ಲೋಕೇಶ್, ರಾಜನ್, ಮಾಜಿ ಸೈನಿಕ ಪುಟ್ಟೇಗೌಡ, ಹೆಚ್.ಎಸ್. ರಘು, ಬೆಂಗಳೂರು ಕಸ್ಟಂ ಸಹಾಯಕ ಆಯುಕ್ತ ಹೆಚ್.ಡಿ. ನೀಲಕಂಠರಾಯ್, ಬಿಬಿಎಂಪಿ ಮುಖ್ಯ ಇಂಜಿನಿಯರ್ ಸೋಮಶೇಖರ್, ಇಂಜಿನಿಯರ್ ನಂಜುಂಡಚಾರ್, ಕೆ. ಪ್ರಸನ್ನ, ಕೆ.ಆರ್. ಕುಮಾರ್, ನಿವೃತ್ತ ಡಿಡಿಪಿಐ ಹೆಚ್.ಡಿ. ಲಿಂಗರಾಜು, ಕೆ.ಕೆ. ರಾಜಪ್ಪ, ಸಹಕಾರ ಉಪ ನಿಬಂಧಕ ಜಿ.ಆರ್. ವಿಜಯಕುಮಾರ್ ಉಪಸ್ಥಿತರಿದ್ದರು.

ಹೆಬ್ಬಾಲೆ ಶಾಲೆಯಲ್ಲಿ ದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಿವೃತ್ತ ಮುಖ್ಯ ಶಿಕ್ಷಕರಾದ ಇ.ಕೆ. ಸುಬ್ರಾಯ, ಹೆಚ್.ಈ. ಪುಟ್ಟಸ್ವಾಮಿ, ಹೆಚ್.ಎನ್. ನಾಗಾಚಾರಿ ಶಿಕ್ಷಕರಾದ ಶ್ರೀನಿವಾಸ ಅಡಿಗರ, ಕೆ.ಎಸ್. ನಾಗಭೂಷಣ, ದಾಸಪ್ಪ, ಎಂ.ಎಂ. ಉಲ್ಲಾಸ್, ಕೆ.ಜಿ. ಪುಟ್ಟರಾಜು, ಬಿ.ಎನ್. ಶಿವೇಗೌಡ, ದಿ. ಎಂ.ಈ. ವೀರಭದ್ರಪ್ಪ ಅವರ ಮಗ ಕಾಂತ್‍ರಾಜ್, ಯು.ಟಿ. ಜಯರಾಮ್ ರಾವ್, ನಿವೃತ್ತ ಸಿಬ್ಬಂದಿಗಳಾದ ಹೆಚ್.ಎಸ್. ಹನುಮಪ್ಪ, ಹೆಚ್.ಕೆ. ಜವರಮ್ಮ, ಬಸವಶೆಟ್ಟಿ, ರಾಜಶೆಟ್ಟಿ ಅವರ ಪತ್ನಿ ಇವರುಗಳನ್ನು ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಹಾಗೂ ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ, ಗೌರವಿಸಿದರು.

ಹಳೆಯ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ಆರಂಭಗೊಂಡ ಮೆರವಣಿಗೆಯನ್ನು ಹಿರಿಯ ವಕೀಲ ಹೆಚ್.ಸಿ. ನಾಗೇಶ್ ಉದ್ಘಾಟಿಸಿದರು. ಅಲಂಕೃತ ರಥದಲ್ಲಿ ನಿವೃತ್ತ ಶಿಕ್ಷಕರನ್ನು ಕುಳ್ಳಿರಿಸಿ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯೋಜಕತ್ವದಲ್ಲಿ ಮಂಡ್ಯ ಜಿಲ್ಲೆಯ ಕಾಸರವಾಡಿ ಬಸವೇಶ್ವರ ಕಲಾ ಬಳಗದ ಕಲಾವಿದ ಗಂಗಾಧರ್ ನೇತೃತ್ವದ ಡೊಳ್ಳು ಕುಣಿತ, ಪೂಜಾ ಕುಣಿತ ಹಾಗೂ ಮೈಸೂರು ಜಿಲ್ಲೆಯ ಕಲಾವಿದ ಸುರೇಶ್ ನೇತೃತ್ವದ ಕಂಸಾಳೆ ನೃತ್ಯ ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿದವು. ಮೈಸೂರು ಜಿಲ್ಲೆಯ ಕೊಪ್ಪ ಗ್ರಾಮದ ಸತೀಶ್ ನೇತೃತ್ವದ ತಂಡದ ವಾದ್ಯಮೇಳ ಮೆರವಣಿಗೆ ರಂಗೇರಿಸಿತು. ಊರಿನ ಮಹಿಳೆಯರು ಪೂರ್ಣಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಕಾಲೇಜಿನ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ಬಾರಿಸುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಊರಿನ ಮುಖ್ಯ ಬೀದಿಯಲ್ಲಿ ಸಾಗಿ ಬಸ್ ನಿಲ್ದಾಣದ ಸರ್ಕಲ್ ಮೂಲಕ ಬಾಣವಾರ ರಸ್ತೆಯಲ್ಲಿ ಸಂಚರಿಸಿ ಶಾಲಾ ಬಳಿ ಅಂತ್ಯಗೊಂಡಿತು.