ಚೆಟ್ಟಳ್ಳಿ, ಫೆ. 19: ಅಮ್ಮತ್ತಿಯ ರೋಮನ್, ಕ್ಯಾಥೋಲಿಕ್ ಬಾಯ್ಸ್ ಇವರ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೈಸ್ತ ಸಮುದಾಯದವರ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಿಶಿ ಕ್ರಿಕೆಟರ್ಸ್ ಅಮ್ಮತ್ತಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಅಬ್ಬೂರುಕಟ್ಟೆ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಬೂರುಕಟ್ಟೆ ತಂಡವು 8 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 73 ರನ್ಗಳ ಗುರಿ ನೀಡಿತು. ನಿಶಿ ಕ್ರಿಕೆಟರ್ಸ್ ಅಮ್ಮತ್ತಿ ತಂಡವು 2 ವಿಕೆಟ್ ನಷ್ಟಕ್ಕೆ 7 ಓವರ್ನಲ್ಲೇ ಗುರಿ ತಲಪಿ, ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನಿಶಿ ಕ್ರಿಕೆಟರ್ಸ್ ತಂಡದ ಸತ್ಯ, ಉತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿಯನ್ನು ಅಬೂರುಕಟ್ಟೆ ತಂಡದ ಪ್ರವೀಣ್ ಹಾಗೂ ಉತ್ತಮ ಬೌಲರ್ ಪ್ರಶಸ್ತಿಯನ್ನು ವೀರಾಜಪೇಟೆ ತಂಡದ ಜೋಯ್ ಪಡೆದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಿ.ಜೆ.ಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಜೋಕಿಮ್ ರೋಡ್ರಿಗಸ್ ವಹಿಸಿದ್ದರು. ವೇದಿಕೆಯಲ್ಲಿ ಕೊಡಗು ಕ್ರೈಸ್ತ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಬೇಬಿ ಮ್ಯಾಥಿವ್, ಜೋಯ್ ,ಡೆನ್ನಿ ಮತ್ತಿತ್ತರರು ಇದ್ದರು.
- ಕೆ.ಎಂ. ಇಸ್ಮಾಯಿಲ್ ಕಂಡಕರೆ