ಚೆಟ್ಟಳ್ಳಿ, ಫೆ. 19: ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಯಿಂದ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೊಡಗಿನ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಮನವಿಯನ್ನು ಸಲ್ಲಿಸಿತು.

ಮನವಿಯಲ್ಲಿ ಭಾಗಮಂಡಲದ ಒಳಚರಂಡಿ ವ್ಯವಸ್ಥೆಗೆ 2014ನೇ ಇಸವಿಯಲ್ಲಿ ದೇವಾಲಯದ ವತಿಯಿಂದ ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ಜಲ ಮಂಡಳಿಗೆ ಪಾವತಿಸಿ ರೂ. 4.50 ಕೋಟಿಗಳ ಅಂದಾಜು ಪಟ್ಟಿ ತಯಾರಿಸಿತ್ತು. ಆದರೆ ಪ್ರಸ್ತುತ ಅದೇ ಕಾಮಗಾರಿಗೆ ರೂ. 6.50 ಕೋಟಿ ವೆಚ್ಚ ತಗಲುತ್ತದೆ ಎಂದು ಮನವಿ ಮಾಡಿದರು.

ಪ್ರವಾಸಿಗರಿಗೆ ಪ್ರವಾಸಿ ಮಂದಿರ ನಿರ್ಮಾಣ ಸೇರಿದಂತೆ ತಲಕಾವೇರಿ ಮತ್ತು ಭಾಗಮಂಡಲ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜು 3.60 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.

ಮುಖ್ಯಮಂತ್ರಿಗಳು ಆಯಾಯ ಇಲಾಖೆಗಳ ಅಧೀನ ಕಾರ್ಯದರ್ಶಿ ಗಳಿಗೆ ದೇವಾಲಯ ಸಮಿತಿಯ ಮನವಿಯನ್ನು ಪರಿಶೀಲಿಸಿ ಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು.

ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರೊಂದಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತಲಕಾವೇರಿಯಲ್ಲಿ ಪುರಾತನ ಕಾಲದ ಹಳೆಯ ಪ್ರವಾಸಿ ಮಂದಿರವೊಂದಿದ್ದು, ಅದು ಪುಂಡ ಪೋಕರಿಗಳ ತಾಣವಾಗಿದೆ. ಅದನ್ನು ಕೆಡವಲು ಅನುಮತಿ ಬೇಕೆಂದರು. ಇದಕ್ಕೆ ಸ್ಪಂದಿಸಿದ ಉಸ್ತುವಾರಿ ಸಚಿವರು, ಅದನ್ನು ದೇವಸ್ಥಾನದ ಹಣದಿಂದಲೇ ಕೆಡವಲು ಅನುಮತಿ ಸೂಚಿಸಿದರು.

ನಿಯೋಗದಲ್ಲಿ ವ್ಯವಸ್ಥಾಪನಾ ಸಣ್ಣುವಂಡ ಕಾವೇರಪ್ಪ, ಕೆದಂಬಾಡಿ ರಮೇಶ್, ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ರಾಜೇಶ್ ಆಚಾರ್ ಅವರುಗಳು ಇದ್ದರು.