ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ

ಶ್ರೀನಗರ, ಫೆ. 15: ಭದ್ರತಾ ಪಡೆಗಳು ಸಂಚರಿಸುವ ವೇಳೆ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪುಲ್ವಾಮ ಉಗ್ರ ಧಾಳಿಯ ಹಿನ್ನೆಲೆ ರಾಜನಾಥ್ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಹುತಾತ್ಮ ಯೋಧರ ಕುಟುಂಬದೊಂದಿಗೆ ನಾವು ಇದ್ದೇವೆ. ಅವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದೇನೆ ಎಂದರು. ಒಂದು ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಭದ್ರತಾ ಪಡೆಗಳು ಸಂಚರಿಸುತ್ತಿದ್ದರೆ, ಮುನ್ನಚ್ಚೆರಿಕೆ ಕ್ರಮವಾಗಿ ಸಾರ್ವಜನಿಕ ಸಂಚಾರಕ್ಕೆ ಕೆಲ ಸಮಯ ನಿರ್ಬಂಧ ವಿಧಿಸಲಾಗುವದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಪುಲ್ವಾಮ ಉಗ್ರರ ಧಾಳಿಗೆ ಸರ್ಕಾರ ಪ್ರತೀಕಾರ ತೆಗೆದುಕೊಳ್ಳದೆ ಇರುವದಿಲ್ಲ. ಸಿಆರ್‍ಪಿಎಫ್ ಯೋಧರ ತ್ಯಾಗವನ್ನು ಈ ದೇಶ ಮರೆಯುವದಿಲ್ಲ. ಹುತಾತ್ಮರಾದ ಯೋಧರಿಗೆ ನಾನು ನನ್ನ ಅಂತಿಮ ನಮನ ಸಲ್ಲಿಸುತ್ತೇನೆ. ಈ ತ್ಯಾಗ ವ್ಯರ್ಥವಾಗಲು ಬಿಡುವದಿಲ್ಲ ಎಂದು ದೇಶದ ಜನತೆಗೆ ರಾಜನಾಥ್ ಸಿಂಗ್ ಭರವಸೆ ನೀಡಿದರು.

ಇಸ್ರೆಲ್ ಪ್ರಧಾನಿ ಬೆಂಜಮಿನ್ ಖಂಡನೆ

ಜೆರುಸಲೆಂ, ಫೆ. 15: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯಾನಕ ಉಗ್ರ ಧಾಳಿಯನ್ನು ಇಸ್ರೆಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಸೇರಿದಂತೆ ಹಲವು ವಿದೇಶಿ ಗಣ್ಯರು ಖಂಡಿಸಿದ್ದಾರೆ. ಉಗ್ರರ ಧಾಳಿಯಲ್ಲಿ ಹುತಾತ್ಮರಾದ ಯೋಧರು ಹಾಗೂ ಅವರ ಕುಟುಂಬ ವರ್ಗಕ್ಕೆ ಟ್ವೀಟರ್ ಮೂಲಕ ಬೆಂಜಮಿನ್ ನೇತಾನ್ಯಹು ಸಂತಾಪ ಸೂಚಿಸಿದ್ದಾರೆ. ಹೇಯ ಭಯೋತ್ಪಾದಕ ಧಾಳಿಗೊಳಗಾಗಿರುವ ಭಾರತದ ಜನತೆ, ಭದ್ರತಾ ಪಡೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾವು ಇರುವದಾಗಿ ಬೆಂಜಮಿನ್ ನೇತಾನ್ಯಹು ತಿಳಿಸಿದ್ದಾರೆ.

ಮಸೂದ್ ಅಝರ್ ಪರ ನಿಂತ ಚೀನಾ

ಬೀಜಿಂಗ್, ಫೆ. 15: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರಿದ್ದ ವಾಹನದ ಮೇಲೆ ನಡೆದ ಉಗ್ರ ಧಾಳಿಯ ರೂವಾರಿ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆ ನಾಯಕ ಮಸೂದ್ ಅಝರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ನಮ್ಮ ಬೆಂಬಲ ನೀಡುವದಿಲ್ಲ ಎಂದು ಚೀನಾ ಹೇಳಿದೆ. ಈ ಮೂಲಕ ಭಾರತದ ಬೇಡಿಕೆಯನ್ನು ಚೀನಾ ತಿರಸ್ಕರಿಸಿದೆ. ಭಯೋತ್ಪಾದನೆ ಕೃತ್ಯ ನಮಗೆ ಆಘಾತವನ್ನು ತಂದಿದೆ. ನಾವಿದನ್ನು ಖಂಡಿಸುತ್ತೇವೆ. ಎಲ್ಲಾ ಬಗೆಯ ಭಯೋತ್ಪಾದನಾ ಕೃತ್ಯಕ್ಕೆ ನಮ್ಮ ವಿರೋಧವಿದೆ ಎಂದು ನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಯಾಂಗ್ ಹೇಳಿದ್ದಾರೆ. ಇನ್ನು ಭಯೋತ್ಪಾದನೆಯನ್ನು ಮಟ್ಟ ಹಾಕಲು ಎಲಾ ದೇಶಗಳು ಕೈಜೋಡಿಸಲಿದೆ ಎಂದು ನಾವು ನಂಬಿದ್ದೇವೆ. ಜೆಇಎಂ ಹಾಗೂ ಮಸೂದ್ ಅಝರ್ ಜಾಗತಿಕ ಭಯೋತ್ಪಾದಕ ಹಾಗು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸುವ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಹಾಗೆ ಮಾಡುವದಕ್ಕೆ ಮುನ್ನ ನಾವು ಜವಾಬ್ದಾರಿಯುತ ನಿರ್ಧಾರಕ್ಕೆ ಬರಬೇಕಿದೆ ಎಂದು ಚೀನಾ ಹೇಳಿದೆ. ವಿಶ್ವಸಂಸ್ಥೆಯಲ್ಲಿ ವಿಟೋ ಅಧಿಕಾರ ಹೊಂದಿರುವ ಚೀನಾ ಅಡ್ಡಿಯಿಂದಾಗಿ ಮಸೂದ್ ಅಝರ್‍ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಯತ್ನ ಇದುವರೆಗೆ ಕೈಗೂಡಿಲ್ಲ.

ಯೋಧರ ಕುಟುಂಬಕ್ಕೆ ಕೋಟಿ ಪರಿಹಾರ

ಲಖನೌ, ಫೆ. 15: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ಧಾಳಿಯಲ್ಲಿ ಹುತಾತ್ಮರಾದ ತಮ್ಮ ರಾಜ್ಯದ ಯೋಧರ ಕುಟುಂಬಕ್ಕೆ ತಲಾ ರೂ. 1 ಕೋಟಿ ಪರಿಹಾರ ನೀಡುವದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಉತ್ತರ ಪ್ರದೇಶ ಸರ್ಕಾರ ಸಹ ತಮ್ಮ ರಾಜ್ಯದ 12 ಸಿಆರ್‍ಪಿಎಫ್ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುತಾತ್ಮ ಯೋಧರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವದಾಗಿ ಉತ್ತರ ಪ್ರದೇಶ ಸರ್ಕಾರದ ವಕ್ತಾರರು ಹೇಳಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಹುತಾತ್ಮ ಯೋಧರ ಅಂತ್ಯ ಸಂಸ್ಕಾರ ನಡೆಸಲಾಗುವದು. ಜಿಲ್ಲಾಧಿಕಾರಿ ಹಾಗೂ ಎಸ್‍ಎಸ್‍ಪಿ ಹೊರತುಪಡಿಸಿ ಸರ್ಕಾರದ ಪರವಾಗಿ ಒಬ್ಬ ಸಚಿವರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಿದ್ದು ಭೇಟಿಯಾದ ಅತೃಪ್ತ ಶಾಸಕರು

ಬೆಂಗಳೂರು, ಫೆ. 15: ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಇಬ್ಬರು ಅತೃಪ್ತ ಶಾಸಕರೊಂದಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಹ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ನಾಲ್ವರು ಅತೃಪ್ತ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ. ನಾಗೇಂದ್ರ, ಉಮೇಶ್ ಜಾಧವ್ ಹಾಗೂ ಮಹೇಶ್ ಕುಮಟಳ್ಳಿ ಅವರು ಪಕ್ಷದ ವಿಪ್ ಉಲ್ಲಂಘಿಸಿ ಶಾಸಕಾಂಗ ಪಕ್ಷದ ಸಭೆಗೆ ಹಾಗೂ ಬಜೆಟ್ ಅಧಿವೇಶನಕ್ಕೆ ಗೈರು ಆಗಿದ್ದರು. ಈ ಹಿನ್ನೆಲೆ ಕಳೆದ ಸೋಮವಾರ ಈ ನಾಲ್ವರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂತೆ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಅನರ್ಹತೆ ಭೀತಿಯಿಂದ ತಪ್ಪಿಸಿಕೊಳ್ಳಲು ಈ ನಾಲ್ವರು ಅತೃಪ್ತ ಕಾಂಗ್ರೆಸ್ ಶಾಸಕರು ಕೊನೆಯ ಒಂದು ದಿನ ಮಾತ್ರ ಅಧಿವೇಶನಕ್ಕೆ ಹಾಜರಾಗಿದ್ದರು.