ಗೋಣಿಕೊಪ್ಪ ವರದಿ, ಫೆ. 15 : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಶಿವು ಮಾದಪ್ಪ ಅವರನ್ನು ಪದಚ್ಯುತಿಗೊಳಿಸಿರುವ ಬಗ್ಗೆ ಪಕ್ಷದ ವರಿಷ್ಠರು ಸ್ಪಷ್ಟ ಕಾರಣವನ್ನು ಮುಂದಿನ 15 ದಿನಗಳಲ್ಲಿ ನೀಡದಿದ್ದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ದಕ್ಷಿಣ ಕೊಡಗಿನ ಪಕ್ಷದ ಪ್ರಮುಖರುಗಳು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಕೊಡಗು ಜಿಲ್ಲೆಯ ಉದ್ದಗಲಕ್ಕೂ ಪಕ್ಷದ ಏಳಿಗೆಗಾಗಿ ದುಡಿಯುತ್ತಿದ್ದ ಶಿವು ಮಾದಪ್ಪ ಅವರನ್ನು ಬದಲಾಯಿಸಿರುವದು ಖಂಡನಾರ್ಹ. ಇದು ನೋವಿನ ವಿಚಾರವಾಗಿದೆ. ಈ ಬಗ್ಗೆ ಸ್ಪಷ್ಟ ಉತ್ತರ ನೀಡದಿದ್ದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ವಿರೋಧ ವ್ಯಕ್ತಪಡಿಸಲಾಗುವದು ಎಂದು ಕಾಂಗ್ರೆಸ್ ಮುಖಂಡ, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಸುದ್ದಿಗೋಷ್ಟಿಯಲ್ಲಿ ಎಚ್ಚರಿಸಿದರು.
ಪಕ್ಷದಲ್ಲಿರುವ ಚಂದ್ರಕಲಾ, ಹುಸೈನ್ ಹಾಗೂ ಮಂಜುನಾಥ್ ಅವರುಗಳು ನಡೆಸುತ್ತಿರುವ ಅಧಿಕಾರಿಗಳ ವರ್ಗಾವಣೆ ದಂಧೆ ಹಾಗೂ ಮರಳು ದಂಧೆಗೆ ಜಿಲ್ಲಾಧ್ಯಕ್ಷನಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಇವರು ಪಕ್ಷದ ವರಿಷ್ಠರನ್ನು ಒತ್ತಡ ಮಾಡಿ ಬದಲಾಯಿಸಿದ್ದಾರೆ ಎಂದು ಆರೋಪಿಸಿದರು. ಬದಲಾವಣೆ ಬಗ್ಗೆ ಮಾಹಿತಿ ನೀಡದೆ ಅಗೌರವ ತೋರಲಾಗಿದೆ. ಬದಲಾವಣೆಯ ಕಾರಣವನ್ನು ಚುನಾವಣೆಗೂ ಮುನ್ನ ತಿಳಿಸಿ ಚುನಾವಣೆ ಎದುರಿಸಲಿ ಎಂದರು.
ಕೊಡವ ಜನಾಂಗವನ್ನು ಪಕ್ಷದಲ್ಲಿ ಕಡೆಗಣಿಸುತ್ತಾ ಬರಲಾಗುತ್ತಿದೆ. ಮಹಿಳಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕುಸುಮ ಜೋಯಪ್ಪ ಅವರನ್ನು ನೇಮಕ ಮಾಡುವಂತೆ ಒತ್ತಾಯಿಸಲಾಗಿತ್ತು, ಆದರೂ ಕಡೆಗಣನೆ ಮೂಲಕ ಪಕ್ಷದಲ್ಲಿ ಕೊಡವ ಜನಾಂಗವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ಪಕ್ಷವನ್ನು ಬುಡದಿಂದ ಬೆಳೆಸಿದ ಕೀರ್ತಿ ಶಿವು ಮಾದಪ್ಪ ಅವರಿಗಿದೆ. ಅವರ ತಂದೆಯಿಂದ ಬಳುವಳಿಯಾಗಿ ಪಡೆದು ಪಕ್ಷವನ್ನು ಸಂಘಟಿಸಿದ್ದರು. ಗ್ರಾಮ ಮಟ್ಟದಿಂದ ಜಿಲ್ಲಾವ್ಯಾಪ್ತಿ ಸಂಘಟನೆ ಮಾಡಿದ್ದರು. ದಿಢೀರ್ ಬದಲಾವಣೆ ಬಗ್ಗೆ ಕಾರಣ ನೀಡಲಿ ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಕೊಲ್ಲೀರ ಬೋಪಣ್ಣ ಮಾತನಾಡಿ, ಬದಲಾವಣೆ ಮಾಡಿರುವದು ನಿಷ್ಠಾವಂತ ಕಾರ್ಯಕರ್ತನಿಗೆ ಮಾಡಿದ ಅನ್ಯಾಯವಾಗಿದೆ. ದುಡಿಯುವವರಿಗೆ ಅನ್ಯಾಯವಾಗುತ್ತಿದೆ. ಇದರಿಂದ ಪಕ್ಷದ ಬೆಳವಣಿಗೆ ತಳಮಟ್ಟಕ್ಕೆ ಇಳಿಯಲಿದೆ. ಬೆಂಗಳೂರಿನಲ್ಲಿ ಕುಳಿತು ರಾಜಕೀಯ ಲಾಬಿ ನಡೆಸಿದರೆ ಪಕ್ಷ ನಾಶವಾಗಲಿದೆ. ಬದಲಾವಣೆಯ ಕಾರಣವನ್ನು ಚುನಾವಣೆಗೂ ಮುನ್ನ ತಿಳಿಸಿ ಚುನಾವಣೆ ಎದುರಿಸಲಿ ಎಂದರು. ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿರುವ ಮಂಜುನಾಥ್ ಅವರು ಈ ಹಿಂದೆ ಚುನಾವಣೆಯಲ್ಲಿ ಕಾಂಗ್ರೆÉಸ್ ಪಕ್ಷದ ವಿರುದ್ಧ ತೊಡಗಿಕೊಂಡಿದ್ದರು. ಅಂತವರನ್ನು ನೇಮಕ ಮಾಡಿ ಪಕ್ಷ ದೊಡ್ಡ ಸಮಸ್ಯೆ ಎದುರಿಸುವಂತಾಗಿದೆ. ಪಕ್ಷದ ಹಿತದೃಷ್ಟಿಯಿಂದ ಬದಲಾವಣೆ ಮಾಡಿದ್ದರೂ ಸರಿಯಾದ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದರು.
ಕಾರ್ಯದರ್ಶಿ ಹುಸೈನ್ ಅವರಿಗೆ ಪಕ್ಷದ ಸಭೆಯನ್ನು ಕಚೇರಿ ಸಿಬ್ಬಂದಿ ಮೂಲಕ ದೂರವಾಣಿಯಲ್ಲಿ ತಿಳಿಸಲಾಗಿದೆ ಎಂಬ ವೈಯಕ್ತಿಕ ವಿಚಾರದಿಂದ ಹೀಗೆ ಮಾಡಲಾಗಿದೆ. ಇದೆಲ್ಲಾ ಪಕ್ಷಕ್ಕೆ ತೊಡಕ್ಕಾಗಲಿದೆ ಎಂದರು. ಗೋಷ್ಠಿಯಲ್ಲಿ ಪ್ರಮುಖರು ಗಳಾದ ಹೊಟ್ಟೆಂಗಡ ಪ್ರಕಾಶ್, ಮೊಹಿದ್ದೀನ್ ಉಪಸ್ಥಿತರಿದ್ದರು.