ಮಡಿಕೇರಿ, ಫೆ. 15: ಕೊಡಗಿನ ನೂತನ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರನ್ನು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ನಿಯೋಗದಿಂದ ಇಂದು ಭೇಟಿ ಮಾಡಿ ಜಿಲ್ಲೆಗೆ ಸ್ವಾಗತ ಕೋರುವದರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲಾಯಿತು. ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ತೆರಳಿದ್ದ ಪ್ರಮುಖರು ಕೆಲವು ಪ್ರಮುಖ ಅಂಶಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಸರಕಾರ, ಇನ್‍ಫೋಸಿಸ್ ಸಂಸ್ಥೆಯ ಸುಧಾಮೂರ್ತಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸೇರಿದಂತೆ ಹಲವರು ನೆರವು ಪ್ರಕಟಿಸಿದ್ದಾರೆ. ಇವುಗಳೆಲ್ಲವನ್ನೂ ಸಮರ್ಪಕವಾಗಿ ಬಳಸಿಕೊಂಡು ಸಂತ್ರಸ್ತರಾದವರಿಗೆ ಮುಂದಿನ ಮಳೆಗಾಲದ ಒಳಗೆ ಮನೆ ನಿರ್ಮಿಸಿಕೊಡಬೇಕು. ಈ ಹಿಂದಿನ ಜಿಲ್ಲಾಧಿಕಾರಿಗಳು ಕೇರಳಕ್ಕೆ ಹುಲ್ಲು ಸಾಗಾಟಕ್ಕೆ ವಿಧಿಸಿದ್ದ ನಿರ್ಬಂಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವದರಿಂದ ಪ್ರಸ್ತುತ ಇದ್ದ ಕ್ರಮವನ್ನು ಸಡಿಲಿಸಿ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಲಾಯಿತು. ಇದಲ್ಲದೆ 2017ರಲ್ಲಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡುವ ಕುರಿತಾಗಿ ನೋಂದಣಿ ಹಾಗೂ ಸಮೀಕ್ಷೆ ನಡೆದಿದ್ದರೂ ಇನ್ನೂ ಇದು ಫಲಾನುಭವಿಗಳಿಗೆ ದೊರೆತಿಲ್ಲ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಕಟ್ಟಿಮಂದಯ್ಯ ಅವರೊಂದಿಗೆ ಸಮಿತಿಯ ಉಪಾಧ್ಯಕ್ಷ ಪೋಡಮಾಡ ಉತ್ತಪ್ಪ, ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಖಜಾಂಚಿ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಪದಾಧಿಕಾರಿಗಳಾದ ನಾಟೋಳಂಡ ಚರ್ಮಣ, ಕೂಪದಿರ ಉತ್ತಪ್ಪ, ಬೊಟ್ಟಂಗಡ ಮಾಚಯ್ಯ, ಮುಲ್ಲೇಂಗಡ ಮಣಿ ಮುತ್ತಣ್ಣ ಪಾಲ್ಗೊಂಡಿದ್ದರು.