ಮಡಿಕೇರಿ, ಫೆ. 15: ಇಂದು ಬೆಳ್ಳಂಬೆಳಿಗ್ಗೆ ಚೇರಂಬಾಣೆ ಸಮೀಪದ ಕಾರುಗುಂದ ರಸ್ತೆಯ ತಿರುವೊಂದರಲ್ಲಿ ಕಾರು ಹಾಗೂ ಲಾರಿಯೊಂದರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಈ ವೇಳೆ ಕಾರು ಮಾಲೀಕ ಪೊನ್ನಂಪೇಟೆ ಸಮೀಪ ಹಳ್ಳಿಗಟ್ಟು ನಿವಾಸಿ ಅಚ್ಚಿಯಂಡ ಸುಭಾಷ್ (ಬೋಸ್) ಎಂಬವರ ಪುತ್ರ ಎ.ಎಸ್. ಅರುಣ್ (44) ಸ್ಥಳದಲ್ಲೇ ಕೊನೆಯುಸಿ ರೆಳೆದಿದ್ದಾರೆ.ಇಂದು ಬೆಳಗಿನ ಜಾವ ಹಳ್ಳಿಗಟ್ಟುವಿನ ತನ್ನ ಮನೆಯಿಂದ, ಚೇರಂಬಾಣೆಯ ತನ್ನ ಅತ್ತೆ ಮೆನೆಗೆ ಬಂದು ನಾಲ್ವರು ಕೆಲಸಗಾರರನ್ನು ಕರೆದುಕೊಂಡು ಮರಳಿ ಹಿಂತಿರುಗುವ ವೇಳೆ ಮುಖ್ಯ ರಸ್ತೆಯ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಸುದ್ದಿ ತಿಳಿದ ಸ್ಥಳೀಯರು ಮೃತರ ವಾಹನದಲ್ಲಿದ್ದ ಕಾರ್ಮಿಕರಿಂದ ಮಾಹಿತಿ ಪಡೆದು ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.ಆ ಮೇರೆಗೆ ಮೃತ ಅರುಣ್ ಪೋಷಕರು ಧಾವಿಸಿ, ನಾಪೋಕ್ಲು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಮೇರೆಗೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಕಾರ್ಮಿಕರು ಸಣ್ಣ ಪುಟ್ಟ ಗಾಯಗೊಂಡು ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಭಾಗಮಂಡಲ - ಮಡಿಕೇರಿಯಲ್ಲಿ ಸಂಭವಿಸಿದ ಈ ಭೀಕರ ಅಪಘಾತ ತಿಳಿದು, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸುವ ಮೂಲಕ ಆತಂಕ ವ್ಯಕ್ತಪಡಿಸುತ್ತಿದ್ದ ದೃಶ್ಯ ಎದುರಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಘಾತಕ್ಕೊಳಗಾಗಿದ್ದ ಲಾರಿ - ಕಾರುಗಳನ್ನು ಅಲ್ಲಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆಗಷ್ಟೇ ಮಾವನ ಮನೆಯಿಂದ ತೆರಳಿದ್ದ ಅಳಿಯ ಅರುಣ್ ಮಾರ್ಗಮಧ್ಯೆ ಅಪಘಾತದಿಂದ ಅಸುನೀಗಿದ್ದನ್ನು ತಿಳಿದು, ಘಟನೆ ಸ್ಥಳ ಮತ್ತು ಇಲ್ಲಿನ ಶವಗಾರ ಬಳಿ ನೆರೆದಿದ್ದ ಬಂಧುವರ್ಗದ ರೋದನ ಮುಗಿಲು ಮುಟ್ಟಿತ್ತು.

ಘಟನೆ ವಿವರ : ಅರುಣ್ ಹಳ್ಳಿಗಟ್ಟು ಗ್ರಾಮದಿಂದ ತನ್ನ ತೋಟ ಕಾರ್ಮಿಕರನ್ನು ಚೇರಂಬಾಣೆಯ ಮಾವ ಗಣೇಶ್ ಮನೆಗೆ ಕರೆತಂದು ಕೆಲಸಕ್ಕೆ ಬಿಟ್ಟಿದ್ದು, ಇಂದು ಬೆಳಿಗ್ಗೆ ಹಿಂದಕ್ಕೆ ಕರೆದುಕೊಂಡು ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ.

ತನ್ನ ಆಲ್ಟೋ ಕಾರಿನಲ್ಲಿ (ಕೆ.ಎ. 12 ಝೆಡ್ 4346) ಕಾರ್ಮಿಕರಾದ ರಮೇಶ್, ಮಂಜು, ಕವಿತಾ ಹಾಗೂ ಮಮತಾ ಎಂಬವರುಗಳನ್ನು ಕರೆದುಕೊಂಡು ತೆರಳುತ್ತಿದ್ದಾಗ 7 ಗಂಟೆ ಸುಮಾರಿಗೆ ಶಿವಮೊಗ್ಗದ ತೀರ್ಥಹಳ್ಳಿಯಿಂದ ಭಾಗಮಂಡಲಕ್ಕೆ ಜೇನು ಸಾಗಿಸುತ್ತಿದ್ದ ಲಾರಿ (ಕೆ.ಎ. 14 ಬಿ. 2416) ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಅರುಣ್ ಅವರ ತಲೆ, ಎದೆ ಹಾಗೂ ಇತರ ಭಾಗಗಳಿಗೆ ಮಾರಣಾಂತಿಕ ಘಾಸಿಯುಂಟಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಆ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡಿರುವ ನಾಪೋಕ್ಲು ಠಾಣಾಧಿಕಾರಿ ನಂಜುಂಡಸ್ವಾಮಿ ಹಾಗೂ ಸಿಬ್ಬಂದಿ ಲಾರಿ ಚಾಲಕ ಅಬ್ದುಲ್‍ರಜಾಕ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ಅರುಣ್ ಅವರ ಪಾರ್ಥಿವ ಶರೀರವನ್ನು ಇಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯೊಂದಿಗೆ ಬಂಧುಗಳ ವಶಕ್ಕೆ ನೀಡಲಾಯಿತು. ಅಲ್ಲಿಂದ ಹಳ್ಳಿಗಟ್ಟುವಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಅರುಣ್ ತಂದೆ, ತಾಯಿ ಪತ್ನಿ ಸಹಿತ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.