ಕುಶಾಲನಗರ, ಫೆ. 15: ಹಾರಂಗಿ ಅಣೆಕಟ್ಟೆಯಲ್ಲಿ ತುಂಬಿರುವ ಹೂಳು ತೆರವುಗೊಳಿಸಲು ಸರಕಾರ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಆಶ್ರಯದಲ್ಲಿ ಖಾಸಗಿ ಸಂಸ್ಥೆ ವತಿಯಿಂದ ಸರ್ವೆ ಕಾರ್ಯ ಪ್ರಾರಂಭಗೊಂಡಿದೆ. ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರಗಳ ಪುನಶ್ಚೇತನ ಕಾಮಗಾರಿಗಳಿಗೆ ರಾಜ್ಯ ಸರಕಾರ ಬಜೆಟ್‍ನಲ್ಲಿ ರೂ. 75 ಕೋಟಿ ಅನುದಾನ ಮೀಸಲಿಟ್ಟಿದ್ದು ಇದೀಗ ಮಂಗಳೂರಿನ ಜಿಯೋ ಮರೈನ್ ಪ್ರೈ ಲಿ ಸಂಸ್ಥೆ ಗುತ್ತಿಗೆ ವಹಿಸಿದೆ.ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಹಾರಂಗಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭೂ ಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಹೂಳು ತುಂಬಿರುವ ಬಗ್ಗೆ ತಜ್ಞರು ಸರಕಾರಕ್ಕೆ ವರದಿ ಸಲ್ಲಿಸಿದ್ದರು.

ಈ ಸಂಬಂಧ ಅಧಿಕಾರಿಗಳು ಮತ್ತು ಗುತ್ತಿಗೆ ಸಂಸ್ಥೆ ಪ್ರಮುಖರು ರ್ಯಾಫ್ಟಿಂಗ್ ಬೋಟ್ ಬಳಸಿ ಹಾರಂಗಿಯ ಹಿನ್ನೀರು ಭಾಗವಾದ ಕೂಟುಹೊಳೆ, ಹಟ್ಟಿಹೊಳೆ, ಮಾದಾಪುರ ಹೊಳೆಗಳು ಹರಿಯವ ಪ್ರದೇಶದಲ್ಲಿ ಪರಿಶೀಲನೆ ನಡೆಸಿದೆ.

ಮಂಗಳೂರಿನ ಜಿಯೋಮರೈನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಎಂಟು ಜನರ ತಂಡ ನಾಲ್ಕು ದಿನಗಳಿಂದ ಹಾರಂಗಿ, ಗರಗಂದೂರು, ಹೇರೂರು, ಹಾರಂಗಿ ಹಿನ್ನೀರು, ಮಾದಾಪುರ ಸುತ್ತಲಿನ ಪ್ರದೇಶಗಳಿಗೆ ಕಾವೇರಿ ನೀರಾವರಿ

(ಮೊದಲ ಪುಟದಿಂದ) ನಿಗಮ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಹಾರಂಗಿ ಅಣೆಕಟ್ಟೆಯಲ್ಲಿ ನೀರು ಇರುವ ಪ್ರದೇಶದಲ್ಲಿ ಬೋಟ್ ಮೂಲಕ ಹೈಡ್ರೋಗ್ರಾಫಿಕ್ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿ ನಾಗರಾಜು ತಿಳಿಸಿದ್ದಾರೆ. ಇತರ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಮೂಲಕ ಸಮೀಕ್ಷೆ ನಡೆಯುತ್ತಿದೆ. ಅಧ್ಯಯನ ತಂಡದೊಂದಿಗೆ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಅಣೆಕಟ್ಟಿನ ವ್ಯಾಪ್ತಿಯ ಮಾಹಿತಿಯನ್ನು ಸಂಸ್ಥೆಯ ಪ್ರಮುಖರಿಗೆ ಒದಗಿಸಿದ್ದಾರೆ. ಸರ್ವೆ ಕಾರ್ಯವು ಈ ತಿಂಗಳ 25ಕ್ಕೆ ಮುಕ್ತಾಯಗೊಳ್ಳಲಿದ್ದು ವರದಿಯನ್ನು ಸರಕಾರಕ್ಕೆ ಸಲ್ಲಿಸಲಾ ಗುವದು ಎಂದು ತಿಳಿದು ಬಂದಿದೆ.