ಕರಿಕೆ, ಫೆ. 15: ಭಾರತ ದೇಶ ಸ್ವತಂತ್ರವಾಗಿ ಎಪ್ಪತ್ತಮೂರು ವರ್ಷ ಕಳೆದರೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದ ಜನತೆ ಮಾತ್ರ ಸೋಮಾಲಿಯ ರಾಷ್ಟ್ರದ ಜನರಂತೆ ಗುಡಿಸಲುಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವದು ನಮ್ಮ ಆಡಳಿತ ವ್ಯವಸ್ಥೆ ತಲೆತಗ್ಗಿಸುವಂತಿದೆ.
ಕೊಡಗು ಜಿಲ್ಲೆಯ ಸೋಮಾವಾರಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮವು ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಮೂವತ್ತೇಳು ಕಿ.ಮೀ. ಹಾಗೂ ತಾಲೂಕು ಕೇಂದ್ರ ಸೋಮವಾರಪೇಟೆಯಿಂದ ಇಪ್ಪತ್ತನಾಲ್ಕು ಕಿ.ಮೀ. ದೂರದಲ್ಲಿದೆ. ಗರ್ವಾಲೆ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಈ ಗ್ರಾಮವು ಸುಂಟಿಕೊಪ್ಪ ಹೋಬಳಿಗೆ ಸೇರಿದೆ. ಗ್ರಾಮದಲ್ಲಿ ನಲವತ್ತ ನಾಲ್ಕು ಮನೆಗಳಿದ್ದು ಕಡುಬಡವರಾಗಿದ್ದಾರೆ. ಊಟಕ್ಕೆ ಭತ್ತ ಹಾಗೂ ತರಕಾರಿಗಳನ್ನು ಬೆಳೆದು ಹೆಚ್ಚಿನ ತರಕಾರಿಗಳನ್ನು ದಲ್ಲಾಳಿಗಳಿಗೆ ಅರ್ಧಂಬರ್ಧ ಬೆಲೆಗೆ ದೂರದ ಸೋಮವಾರಪೇಟೆ, ಸುಂಟಿಕೊಪ್ಪ, ಮಾದಾಪುರಕ್ಕೆ ಮಾರಾಟ ಮಾಡಿ ಹತ್ತು ದಿನಗಳಿಗೆ ಬೇಕಾದ ದಿನಬಳಕೆ ವಸ್ತುಗಳನ್ನು ಖರೀದಿ ಮಾಡಿ ಅಪರೂಪಕ್ಕೆ ಸಂಚರಿಸುವ ಸರಕಾರಿ ಬಸ್‍ನಲ್ಲಿ ಊರಿಗೆ ಮರಳುತ್ತಾರೆ. ಇಲ್ಲಿನ ವಯಸ್ಕರು, ಮಕ್ಕಳು, ಗರ್ಭಿಣಿಯರು ಅನಾರೋಗ್ಯ ಪೀಡಿತರಾದಲ್ಲಿ ಆಸ್ಪತ್ರೆಗೆ ದಾಖಲಿಸಲು ಯಾವದೇ ಸೌಕರ್ಯವಿಲ್ಲ. ಬಹುತೇಕರು ಪಟ್ಟಣದತ್ತ ತಿರುಗಿ ನೋಡುವದಿಲ್ಲ. ಇನ್ನೂ ಇಲ್ಲಿ ಬಹುತೇಕ ಕುಟುಂಬಕ್ಕೆ ವಾಸ ಮಾಡಲು ಯೋಗ್ಯವಾದ ಮನೆಗಳನ್ನು ಒದಗಿಸಲು ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ.