ಮಡಿಕೇರಿ, ಫೆ.14: ರೋಟರಿ ಅಂತರ ರಾಷ್ಟ್ರೀಯ ಸಂಸ್ಥೆ ವತಿಯಿಂದ ಒಂದು ಬೆಡ್ ರೂಂ ಒಳಗೊಂಡ 25 ಮನೆಗಳ ನಿರ್ಮಾಣಕ್ಕೆ ಗುರುವಾರ ಇಗ್ಗೊಡ್ಲು ಗ್ರಾಮದಲ್ಲಿ ಭೂಮಿ ಪೂಜಾ ಕಾರ್ಯಕ್ಕೆ ಚಾಲನೆ ದೊರೆಯಿತು. ರೋಟರಿ ಸಂಸ್ಥೆಯ ಅಂತರ್ರಾಷ್ಟ್ರೀಯ ನಿರ್ದೇಶಕ ಟಿ.ಭಾಸ್ಕರ, ಯೋಜನಾ ನಿರ್ದೇಶಕ ಡಾ. ರವಿ ಅಪ್ಪಾಜಿ ಮತ್ತು ರೋಟರಿ ಜಿಲ್ಲೆ ರಾಜ್ಯಪಾಲ ರೋಹಿನಾಥ್, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಲತಾ ಮತ್ತಿತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು.ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅವರವರ ಸ್ವಂತ ಜಾಗದಲ್ಲಿ ಒಂದು ಮನೆಗೆ 5 ಲಕ್ಷ ರೂ. ನಂತೆ 25 ಮನೆಗಳನ್ನು ರೋಟರಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗುತ್ತದೆ. 25 ಮನೆಗಳಿಗೆ 1.26 ಕೋಟಿ ರೂ. ವೆಚ್ಚವಾಗಲಿದೆ ಎಂದು ರೋಟರಿ ನಿರ್ದೇಶಕ ಟಿ.ಭಾಸ್ಕರ್ ತಿಳಿಸಿದರು. ಪ್ರಕೃತಿ ವಿಕೋಪಕ್ಕೆ ತುತ್ತಾದ ಇಗ್ಗೊಡ್ಲು ಗ್ರಾಮದ ನಿರಾಶ್ರಿತರು ಮನೆ-ಮಠ ಕಳೆದುಕೊಂಡಿದ್ದಾರೆ. ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ನಿರಾಶ್ರಿತರು ಹಿಂದಿನಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಯೋಜನಾ ಮುಖ್ಯಸ್ಥ ಡಾ.ರವಿ ಅಪ್ಪಾಜಿ ಮಾತನಾಡಿ ನಿರಾಶ್ರಿತರಿಗೆ ರೋಟರಿ ಹ್ಯಾಬಿಟೇಟ್ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಮೊದಲ ಹಂತದಲ್ಲಿ 25 ಮನೆ ನಿರ್ಮಿಸಲಾಗುತ್ತಿದೆ ಎಂದರು. ಮಾಹಿತಿ ಮತ್ತು ನಿರ್ವಹಣೆಯ ಹಿರಿಯ ನಿರ್ದೇಶಕ ಸಂಜಯ್ ದಾಸ್ವಾನಿ ಮಾತನಾಡಿ ಕೊಡಗು ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡುವ ಉದ್ದೇಶವಿದೆ. ಮತ್ತು ಕುಡಿಯುವ ನೀರು, ರಸ್ತೆ ಮುಂತಾದ ಅಭಿವೃದ್ಧಿಯನ್ನು ಕೈಗೊಂಡು ಕೊಡಗು ಪುನರ್ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.

ಆರ್.ಐ ಜಿಲ್ಲಾ ರಾಜ್ಯಪಾಲ ಪಿ.ರೋಹಿನಾಥ್ ಮಾತನಾಡಿ ರೋಟರಿ ಹ್ಯಾಬಿಟೇಟ್ ಸಂಸ್ಥೆಯು ದೇಶದಲ್ಲಿ ಸುಮಾರು 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದೆ. ಇಗ್ಗೋಡ್ಲು ಗ್ರಾಮದಲ್ಲಿ 25 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಿಸುತ್ತದೆ. ಎನ್‍ಜಿಒ ಗಳು ಸಹಕಾರ ನೀಡಿದೆ ಎಂದು ತಿಳಿಸಿದರು.

ಸೋಮವಾರಪೇಟೆ ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾತನಾಡಿ ಅಂತರ್ರಾಷ್ಟ್ರೀಯ ರೋಟರಿ ಹ್ಯಾಬಿಟೇಟ್ ಸಂಸ್ಥೆಯು 50 ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 25 ಮನೆಗಳ ನಿರ್ಮಾಣ ಹೆಮ್ಮೆ ತಂದಿದೆ. ಸಂಪೂರ್ಣ ಸಹಕಾರ ಸಂಸ್ಥೆಗೆ ನೀಡಲಾಗುವದು ಎಂದರು.

ಕಾರ್ಯಕ್ರಮದಲ್ಲಿ ನಿರಾಶ್ರಿತರಾದ ಪಾಂಚಾಲಿ, ಶೋಭ, ಟಿ.ರಘು ಹಾಗೂ ಇತರ ನಿರಾಶ್ರಿತರ ಮನೆ ನಿರ್ಮಾಣಕ್ಕೆ ಚೆಕ್ ವಿತರಿಸಲಾಯಿತು. ರೋಟರಿ ಹ್ಯಾಬಿಟೇಟ್ ಸಂಸ್ಥೆ ಕಾರ್ಯದರ್ಶಿ ಕೃಷ್ಣ ಶೆಟ್ಟಿ, ಮಾದಾಪುರ ಪಿಡಿಒ ಸಂತೋಷ್ ಕುಮಾರ್, ಹಾಗೂ ಸಾರ್ವಜನಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಮಾದಾಪುರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರಾರ್ಥನೆ ಮಾಡಿದರು. ಡಾ.ರವಿ ಅಪ್ಪಾಜಿ ಸ್ವಾಗತಿಸಿ, ವಂದಿಸಿದರು.

ಸ್ವಂತ ಜಾಗದಲ್ಲಿ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ಮೊದಲ ಹಂತದ 30 ಲಕ್ಷ ರೂಪಾಯಿಯನ್ನು ಹ್ಯಾಬಿಟೀಲ್ ಫಾರ್ ಹ್ಯೂಮಾನಿಟಿ ಸಂಸ್ಥೆಯ ಹಿರಿಯ ನಿರ್ದೇಶಕ ಸಂಜಯ್ ದಾಸ್‍ವಾನಿ ಅವರಿಗೆ ಹಸ್ತಾಂತರಿಸಲಾಯಿತು. 90ರಿಂದ 120 ದಿನಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗುವ ನಿರೀಕ್ಷೆ ಇದೆ.