ಜಂತಕಲ್ ಮೈನಿಂಗ್ ಹಗರಣ ಮರುಜೀವ ಬೆಂಗಳೂರು, ಫೆ. 14: ಕೆಲವು ವರ್ಷಗಳಿಂದ ತಣ್ಣಗಾಗಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧದ ಜಂತಕಲ್ ಮೈನಿಂಗ್ ಹಗರಣ ಈಗ ಮತ್ತೆ ಜೀವ ಪಡೆದುಕೊಂಡಿದೆ. ಕುಮಾರಸ್ವಾಮಿ ವಿರುದ್ಧದ ಪ್ರಕರಣದ ವಿಚಾರಣೆ ತೀವ್ರಗೊಳಿಸುವಂತೆ ನಿರ್ದೇಶನ ಕೋರಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಜಂತಕಲ್ ಎಂಟರ್ ಪ್ರೈಸಸ್ ಗಣಿ ಪರವಾನಗಿ ನವೀಕರಣದಲ್ಲಿ ಅವ್ಯವಹಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಅದರ ಆಧಾರದ ಮೇಲೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‍ಗೆ ಪಿಐಎಲ್ ಸಲ್ಲಿಕೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಆಗಸ್ಟ್ 10 ರಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕಬ್ಬಾಳ ಗ್ರಾಮದ ಸಾಮಾಜಿಕ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಹರೀಶ ಹಳ್ಳಿ ಎಂಬವರು ಈ ಅರ್ಜಿ ಸಲ್ಲಿಸಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಕಾನೂನು ಇಲಾಖೆ ಕಾರ್ಯದರ್ಶಿ ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಮುಂಬೈ, ಫೆ. 14: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಜಾರೆ ಅವರ ಮೆದುಳಿಗೆ ರಕ್ತ ಪೂರೈಕೆಯ ಕೊರತೆಯುಂಟಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಭ್ರಷ್ಟಾಚಾರ-ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಹಜಾರೆ ಲೋಕಪಾಲ್ ವಿಧೇಯಕ ಜಾರಿ, ಲೋಕಪಾಲರ ನೇಮಕಕ್ಕಾಗಿ ಕಳೆದ ಕೆಲ ದಿನಗಳ ಹಿಂದಷ್ಟೇ ಏಳು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಣ್ಣಾ ಅವರ ಮಿದುಳಿಗೆ ರಕ್ತ ಪೂರೈಕೆಯ ಕೊರತೆಯಿಂದಾಗಿ ಶಕ್ತಿ ಹೀನತೆ, ನರದೌರ್ಬಲ್ಯಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹಜಾರೆಯವರನ್ನು ಪರಿಶೀಲಿಸಿದ್ದ ಡಾ. ಬಾಪು ಕಂದೇಕರ್ ಹೇಳಿದ್ದಾರೆ. ತಮ್ಮ ಸ್ವಗ್ರಾಮ ರಾಳೆಗನ್ ಸಿದ್ದಿಯಲ್ಲಿ ವಾಸವಿದ್ದ ಹಜಾರೆ ಅವರಿಗೆ ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಶುಕ್ರವಾರದ ನಂತರ ಅಣ್ನಾ ಆರೋಗ್ಯದ ಪರಿಸ್ಥಿತಿ ಅರಿತು ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಹಜಾರೆ ಬೆಂಬಲಿಗರಾದ ಸಂಜಯ್ ಪಾದಡೆ ತಿಳಿಸಿದ್ದಾರೆ.

ಬಜೆಟ್ ಅಧಿವೇಶನ : 1 ದಿನ ಮೊದಲೇ ತೆರೆ

ಬೆಂಗಳೂರು, ಫೆ. 14: ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆ ಸೇರಿದಂತೆ ಹಲವು ವಿಧೇಯಕಗಳಿಗೆ ಅಂಗೀಕಾರ ಪಡೆಯುವದರೊಂದಿಗೆ ಬಜೆಟ್ ಅಧಿವೇಶನಕ್ಕೆ ಒಂದು ದಿನ ಮೊದಲೇ ತೆರೆ ಬಿದ್ದಿದೆ. ಫೆಬ್ರವರಿ 6ರಂದು ರಾಜ್ಯಪಾಲ ವಜೂಭಾಯಿ ವಾಲಾ ಅವರ ಭಾಷಣದೊಂದಿಗೆ ಆರಂಭವಾಗಿದ್ದ ಬಜೆಟ್ ಅಧಿವೇಶನ ನಾಳೆ, ಅಂದರೆ ಫೆಬ್ರವರಿ 15 ರವರೆಗೆ ನಡೆಯಬೇಕಿತ್ತು. ಆದರೆ ಅಧಿವೇಶನ ಆರಂಭವಾದಾಗಿನಿಂದ ಸುಗಮ ಕಲಾಪಕ್ಕೆ ಪ್ರತಿಪಕ್ಷ ಬಿಜೆಪಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ವಿಧಾನಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಇಂದು ಬಿಜೆಪಿ ಸದಸ್ಯರ ಧರಣಿಯ ನಡುವೆಯೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಪ್ರಸ್ತಾವವನ್ನು ಅಂಗೀಕರಿಸಲಾಯಿತು. 2019 - 2020ನೇ ಸಾಲಿನ 80168 ಕೋಟಿ ರೂ ಲೇಖಾನುದಾನ ಹಾಗೂ ರೂ. 14581 ಕೋಟಿ ಪೂರಕ ಅಂದಾಜು ಧನ ವಿನಿಯೋಗ ಕುರಿತ ಹಣಕಾಸು ಮಸೂದೆಗಳಿಗೆ ಸದನ ಅಂಗೀಕರಿಸಿದೆ. ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸದಸ್ಯರ ಧರಣಿ ಮತ್ತು ಪ್ರತಿಭಟನೆ ನಡುವೆಯೇ ಮಸೂದೆಗಳನ್ನು ಮಂಡಿಸಿದರು. ಸಭಾಧ್ಯಕ್ಷ ರಮೇಶ್ ಕುಮಾರ್ ಮಸೂದೆಗಳನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಳೆದ ಶುಕ್ರವಾರ ರೂ. 2.34 ಲಕ್ಷ ಕೋಟಿ ಮೊತ್ತದ 2019 - 20ನೇ ಸಾಲಿನ ಆಯವ್ಯಯ ಮಂಡಿಸಿದ್ದರು. ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲೆ ಜೆಡಿಎಸ್ ಕಾರ್ಯಕರ್ತರು ಧಾಳಿ ನಡೆಸಿರುವ ಪ್ರಕರಣವನ್ನು ಮುಂದಿಟ್ಟುಕೊಂಡು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಧರಣಿ ನಡುವೆಯೇ ಮಸೂದೆಗಳಿಗೆ ಅನುಮೋದನೆ ದೊರೆಯಿತು.

ಹಣಕಾಸು ಮಸೂದೆಗಳಿಗೆ ಅನುಮೋದನೆ

ಬೆಂಗಳೂರು, ಫೆ. 14: ಬಿಜೆಪಿ ಸದಸ್ಯರ ಧರಣಿ, ಗದ್ದಲದ ನಡುವೆಯೇ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆಗಳಿಗೆ ಗುರುವಾರ ವಿಧಾನಸಭೆ ಅನುಮೋದನೆ ನೀಡಿದೆ. ರಾಜ್ಯಪಾಲ ವಜೂಭಾಯಿ ವಾಲಾ ಅವರು ಈ ತಿಂಗಳ 6 ರಂದು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ್ದ ಭಾಷಣದ ಮೇಲಿನ ವಂದನೆ ಸಲ್ಲಿಸುವ ನಿರ್ಣಯ ಕುರಿತ ಪ್ರಸ್ತಾವವನ್ನು ಧರಣಿ ನಡುವೆಯೇ ಅಂಗೀಕರಿಸಲಾಯಿತು. 2019 - 2020ನೇ ಸಾಲಿನ ರೂ. 80168 ಕೋಟಿ ಲೇಖಾನುದಾನ ಹಾಗೂ ರೂ. 14581 ಕೋಟಿ ಪೂರಕ ಅಂದಾಜು ಧನ ವಿನಿಯೋಗ ಕುರಿತ ಹಣಕಾಸು ಮಸೂದೆಗಳಿಗೆ ಸದನ ಅಂಗೀಕರಿಸಿದೆ. ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ಸದಸ್ಯರ ಧರಣಿ ಮತ್ತು ಪ್ರತಿಭಟನೆ ನಡುವೆಯೇ ಮಸೂದೆಗಳನ್ನು ಮಂಡಿಸಿದರು. ಸಭಾಧ್ಯಕ್ಷ ರಮೇಶ್ ಕುಮಾರ್ ಮಸೂದೆಗಳನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಯಿತು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಳೆದ ಶುಕ್ರವಾರ ರೂ. 2.34 ಲಕ್ಷ ಕೋಟಿ ಮೊತ್ತದ 2019 - 20ನೇ ಸಾಲಿನ ಆಯವ್ಯಯ ಮಂಡಿಸಿದ್ದರು.

ಧರ್ಮಸ್ಥಳದಲ್ಲಿ ವೇದಿಕೆ ಚಪ್ಪರ ಕುಸಿತ

ಧರ್ಮಸ್ಥಳ, ಫೆ. 14: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ವೇಳೆ ವೇದಿಕೆಯೊಂಡರ ಚಪ್ಪರ ಕುಸಿದಿದ್ದು ಹಲವ್ರು ಗಾಯಗೊಂಡಿದ್ದಾರೆ. ಮಹಾಮಸ್ತಕಾಭಿಷೇಕ ನಡೆಯುತ್ತಿದ್ದ ಸ್ಥಳದಲ್ಲಿನ ಪಂಚಮಹಾವೈಭವ ವೇದಿಕೆಯ ಚಪ್ಪರ ಕುಸಿದಿದೆ. ವೇದಿಕೆಗೆ ಹಾಲ್ಕಲಾಗಿದ್ದ ಪೆಂಡಾಲ್ ಕುಸಿದಿದ್ದು ಹಲವರು ಅದರಡಿಗೆ ಸಿಕ್ಕು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೆಂಡಾಲ್ ಅಡಿಯಲ್ಲಿ ಇನ್ನೂ ಹಲವ್ರು ಸಿಕ್ಕಿಹಾಕಿಕೊಂಡಿರುವ ಶಂಕೆ ಇದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ತಗಡಿನ ಶೀಟುಗಳಿಂದ ರಚಿಸಲಾಗಿದ್ದ ಈ ಪೆಂಡಾಲ್‍ನ ಬಹುಭಾಗ ಕುಸಿದಿರುವದಾಗಿ ವರದಿಯಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

ಭೀಕರ ಅಪಘಾತದಲ್ಲಿ ನಾಲ್ವರ ಸಾವು

ಕಾರವಾರ, ಫೆ. 14: ಟ್ಯಾಂಕರ್ ಹಾಗೂ ಕಾರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಸಮೀಪ ನಡೆದಿದೆ. ಅಂಕೋಲಾ ತಾಲೂಕು ರಾಷ್ಟ್ರೀಯ ಹೆದ್ದಾರಿ 66ರ ಹಾರವಾಡದಲ್ಲಿ ಸಂಭವಿಸಿದ ಅಪಘಾತದಲ್ಲಿ ದೊಡ್ಡಬಳ್ಳಾಪುರ ಮೂಲದ ಮೀನ, ರಮೇಶ್ ಎನ್ನುವವರು ಮೃತಪಟ್ಟಿದ್ದು ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಪಲ್ಲವಿ ಎಂಬ ಮಹಿಳೆಗೆ ಗಂಭೀರ ಗಾಯವಾಗಿದ್ದು ಆಕೆಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗೋವಾದಿಂದ ಹಿಂತಿರುಗುತ್ತಿದ್ದ ಒಡಿಶಾ ನೊಂದಣಿಯಾಗಿದ್ದ ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದರು. ಅಂಕೋಲ ಸಮೀಪ ಕಾರು ಆಗಮಿಸಿದ್ದ ವೇಳೆ ಎದುರಿನಿಂಡ ಬಂದ ಟ್ಯಾಂಕರ್ ಡಿಕ್ಕಿಯಾಗಿದೆ. ಘಟನೆ ಬಳಿಕ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.