ಮಡಿಕೇರಿ,ಫೆ.13: ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಮನೆ ಕಟ್ಟಲು ಜಾಗ ವಶಕ್ಕೆ ಪಡೆಯಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮದಿಂದ ಅತೀ ಸಣ್ಣ ಬೆಳೆಗಾರರೋರ್ವರ ಸ್ಥಿತಿ ಬೀದಿಗೆ ಬಂದ ಘಟನೆ ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಗೋಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. ತೋಟವನ್ನು ಕಂದಾಯ ಇಲಾಖೆ ಮನೆ ನಿರ್ಮಾಣಕ್ಕೆ ವಶಕ್ಕೆ ಪಡೆದಿದ್ದು ಬೆಳೆಗಾರ ಹೃದಯ ನೋವು ತಾಳಲಾರದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಹಿನ್ನೆಲೆ : 2018ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಜೋಡುಪಾಲ, ಮೊಣ್ಣಂಗೇರಿ, ಮದೆನಾಡು ವ್ಯಾಪ್ತಿಯಲ್ಲಿ ಭೂ ಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ ನೂರಾರು ಮಂದಿ ಸಂತ್ರಸ್ತರಾಗಿದ್ದರು. ಈ ಸಂದರ್ಭ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತ ಗೋಳಿಕಟ್ಟೆಯ ಹರಬ್ಬಿ ಬಾಣೆಯ ಒಟ್ಟು 13 ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲು ಮುಂದಾಯಿತು. ಹರಬಿಬಾಣೆಯನ್ನು ಗೋಳಿಕಟ್ಟೆ ಗ್ರಾಮಸ್ಥರು ತಲತಲಾಂತರದಿಂದ ಸಂರಕ್ಷಿಸಿಕೊಂಡು ಬಂದಿದ್ದರು. ಮಾತ್ರವಲ್ಲದೇ ಗ್ರಾಮದೇವರ ಪೂಜೆ, ಹಬ್ಬ ಹರಿದಿನಗಳಲ್ಲಿ ಹರಬಿ ಬಾಣೆಯಲ್ಲಿ ಪೂಜಾವಿಧಿ ವಿಧಾನಗಳು ನಡೆಯುವದರೊಂದಿಗೆ ಪೂಜ್ಯ ಸ್ಥಾನ ಪಡೆದುಕೊಂಡಿತ್ತು. ಈ ನಡುವೆ ಕೆಲವರು ಹರಬಿ ಬಾಣೆಯನ್ನು ಅತಿಕ್ರಮಿಸಲು ಮುಂದಾದಾಗ ಊರಿನ ಹಿರಿಯರು ಮುಂದೆ ನಿಂತು ಅದನ್ನು ರಕ್ಷಿಸಿದ್ದರು.

ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಮನೆ ಕಳೆದುಕೊಂಡವರಿಗೆ ಜಿಲ್ಲಾ ಕಂದಾಯ ಇಲಾಖೆ ನಿವೇಶನದ ಹುಡುಕಾಟ ನಡೆಸಿದ ಸಂದರ್ಭ ಊರಿನವರು ಮಾನವೀಯ ದೃಷ್ಟಿಯಿಂದ ತಲತಲಾಂತರಗಳಿಂದ ಸಂರಕ್ಷಿಸಿಕೊಂಡು ಬಂದಿದ್ದ ಹರಬಿಬಾಣೆಯನ್ನು ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಬಳಸಿಕೊಳ್ಳುವಂತೆ ಹೇಳಿದ್ದರು.

(ಮೊದಲ ಪುಟದಿಂದ)

ಮಾನವೀಯತೆ ಮುಳ್ಳಾಯಿತು

ಸಮತಟ್ಟಾದ ಬಾಣೆಯನ್ನು ಗುರುತಿಸಿ ಸರ್ವೇ ನಡೆಸಿದ ಜಿಲ್ಲಾಡಳಿತ ಸಂಪೂರ್ಣ ಪ್ರದೇಶವನ್ನೇ ವಶಕ್ಕೆ ಪಡೆಯಲು ಮುಂದಾಯಿತು. ಈ ಬಾಣೆಯ ಪಕ್ಕದ ರಸ್ತೆಯ ಕಳೆಭಾಗ ಕೊಲ್ಯದ ಚಂಗಪ್ಪ ಎಂಬವರ ತಂದೆ ಅಂದಾಜು 70 ವರ್ಷಕ್ಕೂ ಮೊದಲು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿ, ಕಾಫಿ ಕೃಷಿ ನಡೆಸಿದ್ದರು. ಬಳಿಕ ಅವರು ಮೃತಪಟ್ಟ ಸಂದರ್ಭ ಅವರ ಮಗ ಚಂಗಪ್ಪ ಕಾಫಿ ತೋಟವನ್ನು ಅಭಿವೃದ್ದಿ ಮಾಡಿಕೊಂಡು ಕಳೆದ 50 ವರ್ಷಗಳಿಂದ ಅನುಭವಿಸಿಕೊಂಡು ಬಂದಿದ್ದರು. ಪ್ರಸ್ತುತ 3 ಎಕರೆ ತೋಟ ಹೊಂದಿರುವ ಚಂಗಪ್ಪ ಅವರ ತಂದೆ ಕೇವಲ 90 ಸೆಂಟ್ ಜಾಗವನ್ನು ಒತ್ತುವರಿ ಮಾಡಿ 70 ವರ್ಷಗಳಿಂದಲು ಕೃಷಿ ಮಾಡಿಕೊಂಡು ಬಂದಿದ್ದರು. ಚಂಗಪ್ಪ ಅವರು ತಮ್ಮ ಪುತ್ರನ ವಿವಾಹ ಮಾಡಿದ ಬಳಿಕ 70 ವರ್ಷಗಳ ಹಿಂದೆ ಒತ್ತುವರಿಯಾದ 90 ಸೆಂಟ್ ಕಾಫಿ ತೋಟ ಸೇರಿದಂತೆ ಒಟ್ಟು 3 ಎಕರೆಯನ್ನು ಮಗನಾದ ಶಿವು ಪ್ರಕಾಶ್ ಅವರ ಸ್ವಾಧೀನಕ್ಕೆ ಒಪ್ಪಿಸಿದ್ದರು. ಪ್ರಸ್ತುತ ಕಾಫಿ ತೋಟ ಅಭಿವೃದ್ಧಿಯಾಗಿ 50 ವರ್ಷ ಕಳೆದಿದ್ದು ಫಸಲು ಭರಿತ ತೋಟವಾಗಿ ಮಾರ್ಪಟ್ಟಿದೆ.

ಕಂದಾಯ ಇಲಾಖೆ ಸರ್ವೇ ನಡೆಸಿದ ಸಂದರ್ಭ 90 ಸೆಂಟ್ ಜಾಗ ಒತ್ತುವರಿಯಾಗಿರುವದು ಕಂಡು ಬಂದಿದೆ. ಹಿಂದಿನ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಫಸಲು ಭರಿತ ಕಾಫಿ ತೋಟದ ಒತ್ತುವರಿಯಾದ ವರ್ಷ ಮತ್ತು ಒತ್ತುವರಿದಾರರು ಅನುಭವಿಸಿಕೊಂಡು ಬಂದಿರುವ ಕಾಲಾವಧಿಯನ್ನು ಪರಿಗಣಿಸಿ ಬದಲಿ ಜಾಗ ಅಥವಾ ಸ್ವಲ್ಪ ಭಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವಂತೆ ಹೇಳಿದ್ದರು.

ಆದರೆ ಇದೀಗ 90 ಸೆಂಟ್ ಜಾಗವನ್ನು ಕೂಡ ಒತ್ತುವರಿ ಹೆಸರಲ್ಲಿ ವಶಕ್ಕೆ ಪಡೆಯಲು ಕಂದಾಯ ಇಲಾಖೆ ಮುಂದಾಗಿದೆ. ಜೆಸಿಬಿ ಯಂತ್ರದ ಸಹಾಯದಿಂದ ತೋಟದ ಒಳಗಿದ್ದ ಕಾಫಿ ಗಿಡ, ಮರಗಳನ್ನು ತೆರವು ಮಾಡಲಾಗುತ್ತಿದ್ದು, ಇದರಿಂದ ನೊಂದ ಬೆಳೆಗಾದ ಶಿವು ಪ್ರಕಾಶ್ ಎದೆ ನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ತಂದೆ ಚಂಗಪ್ಪ 50 ವರ್ಷಗಳಿಂದ ತಮ್ಮ ಸ್ವಾಧೀನದಲ್ಲಿ ಮಗುವಂತೆ ಬೆಳೆಸಿದ್ದ ಕಾಫಿ ಗಿಡಗಳು ಕಣ್ಣೇದುರೇ ಧ್ವಂಸಗೊಳಿಸುತ್ತಿರುವದನ್ನು ಕಂಡು ಕಂಬನಿ ಮಿಡಿಯುತ್ತಿದ್ದಾರೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಗ್ರಾಮಸ್ಥರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಮಾನವೀಯತೆ ದೃಷ್ಟಿಯಲ್ಲಿ ತಲತಲಾಂತರಗಳಿಂದ ರಕ್ಷಿಸಿಕೊಂಡು ಬಂದಿದ್ದ ಹರಬಿಬಾಣೆ ಜಾಗವನ್ನು ಬಿಟ್ಟುಕೊಡುವ ಬದಲು ಅದನ್ನು ಉಳಿಸಿಕೊಂಡಿದ್ದರೆ ನಮ್ಮ ಗ್ರಾಮದ ಬಡ ಬೆಳೆಗಾರನ ಬದುಕು ಬೀದಿಗೆ ಬರುತ್ತಿರಲಿಲ್ಲ ಎಂದು ಮರುಗುತ್ತಿದ್ದಾರೆ. ಜಿಲ್ಲಾಡಳಿತ, ಕಂದಾಯ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರಕಾರ ಬಡ ಬೆಳೆಗಾರನ ಬದುಕಿಗೆ ನೆರವಾಗುವ ರೀತಿಯಲ್ಲಿ ಸ್ಪಂದಿಸಬೇಕೆಂದು ಕರ್ನಾಟಕ ಅರೆಭಾಷೆ ಅಕಾಡಮಿಯ ಮಾಜೀ ಅಧ್ಯಕ್ಷ ಕೊಲ್ಯದ ಗಿರೀಶ್, ಗ್ರಾಮದ ಪ್ರಮುಖರಾದ ಕಿಮ್ಮುಡಿರ ಜಗದೀಶ್, ಅರುಣ, ಕಂಬು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.