ಸಿದ್ದಾಪುರ, ಫೆ. 13 : ಕಳೆದ 9 ದಿನಗಳಿಂದ ಗ್ರಾಮದಲ್ಲಿ ಹಲವಾರು ಸಂಶಯಗಳಿಗೆ ಎಡೆಮಾಡಿದ ವಿದ್ಯಾರ್ಥಿನಿಯೋರ್ವಳ ನಾಪತ್ತೆ ಪ್ರಕರಣವು ಪೊಲೀಸರ ತನಿಖೆಯಿಂದ ಬಯಲಾಗಿದೆ. ಫೆಬ್ರವರಿ 4 ರಂದು ನಾಪತ್ತೆಯಾದ ಎಮ್ಮೆಗುಂಡಿ ತೋಟದ ಕಾರ್ಮಿಕ ದಂಪತಿಗಳಾದ ಚಂದ್ರ ಹಾಗೂ ಪಾರ್ವತಿ ಅವರ ಪುತ್ರಿ ಅಪ್ರಾಪ್ತೆ ಬಾಲಕಿ ಸಂಧ್ಯಾಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯನ್ನು ಅಪಹರಣ ಮಾಡಿ, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, ಆರೋಪಿಗಳಾದ ಪಶ್ಚಿಮ ಬಂಗಾಳ ಮೂಲದ ರಂಜಿತ್ ಹಾಗೂ ಸಂದೀಪ್ ಎಂಬಿಬ್ಬರನ್ನು ಬಂಧಿಸಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ 4 ರಂದು ನೆಲ್ಯಹುದಿಕೇರಿ ಕಾಲೇಜಿನ ವಿದ್ಯಾರ್ಥಿನಿ, ಅಪ್ರಾಪ್ತೆ ಬಾಲಕಿ ಸಂಧ್ಯಾ ಕಾಲೇಜು ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಎಮ್ಮೆಗುಂಡಿ ತೋಟದ ಕೆರೆಯ ಬಳಿ ಹೊಂಚು ಹಾಕಿ ಕಾಯುತ್ತಿದ್ದ
(ಮೊದಲ ಪುಟದಿಂದ) ಆರೋಪಿಗಳು ಆಕೆಯನ್ನು ಅಪಹರಣ ಮಾಡಿ ಅದೇ ತೋಟದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಪೂರ್ವಯೋಜನೆಯಂತೆ ಆಕೆಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿ ತೋಟದಲ್ಲಿರುವ ಕಲ್ಲಿನ ಪೊಟರೆಯೊಳಗೆ ಶವವನ್ನು ಹೂತ್ತಿಟ್ಟಿದ್ದರು ಎಂದು ತಿಳಿಸಿದರು.
ಬಾಲಕಿ ಅಪಹರಣವಾದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಭೇದಿಸಲು ಡಿ.ವೈ.ಎಸ್.ಪಿ ಸುಂದರ್ ರಾಜ್ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ ಮೇರೆಗೆ ಎಮ್ಮೆಗುಂಡಿ ತೋಟದ ಸಮೀಪದ ತೋಟವಾದ ಕರಡಿಕಾಡು ತೋಟದ ಕಾರ್ಮಿಕರನ್ನು ಸಂಶಯದ ಮೇರೆಗೆ ಬಂಧಿಸಿ ವಿಚಾರಣೆಗೊಳಪಡಿಸಿದ ಮೇರೆಗೆ ಆರೋಪಿಗಳು ತಾವೇ ಕೃತ್ಯ ನಡೆಸಿದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆಂದು ಮಾಹಿತಿ ನೀಡಿದರು. ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆಸಿರುವದಾಗಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ ಹಾಗೂ ಡಿ.ವೈ.ಎಸ್.ಪಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಎಸ್. ಐ. ಎಂ ಮಹೇಶ್, ವೃತ್ತನೀರಿಕ್ಷಕ ಅನೂಪ್ ಮಾದಪ್ಪ ಸಿದ್ದಾಪುರ ಠಾಣಾಧಿಕಾರಿ ದಯಾನಂದ್ ಹಾಗೂ ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ವೆಂಕಟೇಶ್, ಅನಿಲ್, ವಸಂತ ನಿರಂಜನ್, ಸಿ.ಡಿ.ಆರ್, ಸೇಲ್ ನ ಎಂ.ಎ. ಗಿರೀಶ್ ಮುಂತಾದವರು ಪಾಲ್ಗೊಂಡಿದ್ದಾಗಿ ಮಾಹಿತಿ ನೀಡಿದರು.
ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಹೇಳಿದರು.
ಪ್ರಕರಣ ಹಿನ್ನೋಟ
ತಾ. 4 ರಂದು ಕಾಲೇಜಿನಿಂದ ಹಿಂತಿರುಗಿ ಮನೆಯತ್ತ ತೆರಳುತ್ತಿದ್ದ 17 ರ ಪ್ರಾಯದ ಸಂಧ್ಯಾಳು ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಕುರಿತು ಪೋಷಕರು ಹಾಗೂ ಸ್ಥಳೀಯರು ಸೇರಿ ವಿದ್ಯಾರ್ಥಿನಿ ನಾಪತ್ತೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದರು. ಪೋಷಕರ ಪುಕಾರಿನ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಮೊದಲಿಗೆ ವಿದ್ಯಾರ್ಥಿನಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟದ ವಾಚ್ ಮ್ಯಾನ್ ಸೇರಿದಂತೆ ಸಂಬಂಧಿಕರು ಹಾಗೂ ಸ್ಥಳೀಯ ಕಾರ್ಮಿಕರನ್ನು ವಿಚಾರಣೆ ನಡೆಸಿದ್ದರು. ಈ ಸಂದರ್ಭ ಸೋಮವಾರದಂದು ಕಾಲೇಜಿನಿಂದ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ತೋಟದ ವಾಚ್ ಮ್ಯಾನ್ ಮನೆಗೆ ತೆರಳುವ ಮಾರ್ಗ ಮಧ್ಯೆ ಕೆರೆಯ ಬಳಿ ನೋಡಿರುವದಾಗಿ ಹೇಳಿಕೆ ನೀಡಿದ್ದರು, ಇದೇ ಸಂದರ್ಭ ವಿದ್ಯಾರ್ಥಿನಿಯೊಂದಿಗೆ ಫೋನ್ ಸಂಭಾಷಣೆಯಲ್ಲಿದ್ದ ತನ್ನ ಸಂಬಂಧಿಕನು ಕೂಡ ಕೊನೆಂiÀiದಾಗಿ ಆಕೆ ತಾನು ಕೆರೆಯ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿರುವದಾಗಿ ಹೇಳಿರುವದನ್ನು ಸಂಬಂಧಿಕ ಯುವಕ ಪೊಲೀಸರಿಗೆ ಮಾಹಿತಿ ನೀಡಿರುತ್ತಾನೆ. ಯುವಕ ನೀಡಿದ ಮಾಹಿತಿಯಲ್ಲಿ ತನ್ನೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸುತ್ತಿದ್ದ ಸಂದರ್ಭ ದಿಢೀರನೆ ಸಂಧ್ಯಾ ಕಿರುಚಿಕೊಂಡಿರುವದನ್ನು ಸ್ಪಷ್ಟಪಡಿಸಿರುವದು ಪೊಲೀಸರ ತನಿಖೆಗೆ ಪುಷ್ಟಿ ನೀಡಿದಂತಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಯ ಬೇಡಿಕೆ
ಮೃತ ಸಂಧ್ಯಾಳನ್ನು ಕಳೆದ ಕೆಲವು ದಿನಗಳಿಂದ ಆರೋಪಿ ಸಂದೀಪ್ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆಕೆ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡುವ ಸಂಚು ರೂಪಿಸಿರುವದಾಗಿ ಆರೋಪಿಯು ಒಪ್ಪಿಕೊಂಡಿರುವದಾಗಿ ಮಾಹಿತಿ ನೀಡಿದ್ದಾರೆ.
ಕಾರ್ಮಿಕರು, ಗ್ರಾಮಸ್ಥರ ಕಂಬನಿ
ಸಂಧ್ಯಾ ದುರ್ಮರಣಗೊಂಡಿರುವ ಮಾಹಿತಿ ತಿಳಿದು ಕಾರ್ಮಿಕರು ಹಾಗೂ ಗ್ರಾಮಸ್ಥರು ಮೃತಪಟ್ಟ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಬೇಟಿ ನೀಡಿ ಬೇಸರ ವ್ಯಕ್ತಪಡಿಸಿ ಕಂಬನಿ ಮಿಡಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳದಲ್ಲಿ ಎಸ್.ಪಿ ಸುಮನ ಡಿ.ಪಿ , ಡಿವೈಎಸ್ಪಿ ಸುಂದರ್ರಾಜ್, ಸಿ.ಐ ಅನೂಪ್ ಮಾದಪ್ಪ, ಮಹೇಶ್, ಠಾಣಾಧಿಕಾರಿ ದಯಾನಂದ್ ಹಾಜರಿದ್ದರು.
-ಚಿತ್ರ ವರದಿ : ವಾಸು, ಸುಧಿ