ಮಡಿಕೇರಿ, ಫೆ. 13: ಕಳೆದ ಆಗಸ್ಟ್‍ನಲ್ಲಿ ಕೊಡಗಿನ ಮಟ್ಟಿಗೆ ಕಂಡುಕೇಳರಿಯದ ಮಳೆಯ ತೀವ್ರತೆ ನಡುವೆ, ಪ್ರಮುಖ ಹೆದ್ದಾರಿಗಳ ಸಹಿತ ಜಿಲ್ಲೆಯ ಹಲವೆಡೆ ಭೂಕುಸಿತದಿಂದ ಸಾಕಷ್ಟು ಕಷ್ಟ - ನಷ್ಟದೊಂದಿಗೆ 18 ಮಂದಿ ಪ್ರಾಣ ಕಳೆದುಕೊಂಡಿದ್ದರು. ತಿಂಗಳುಗಟ್ಟಲೆ ಹೆದ್ದಾರಿ ಸಂಪರ್ಕ ಸ್ಥಗಿತಗೊಂಡು ಜನತೆ ಬವಣೆ ಅನುಭವಿಸಿದ್ದರು. ಆ ನಂತರದಲ್ಲಿ ಆರೆಂಟು ತಿಂಗಳು ಕಳೆದು ಹೋಗಿದೆ.ಮುಖ್ಯವಾಗಿ ಮಡಿಕೇರಿ - ಸಂಪಾಜೆ ನಡುವೆ ಅಲ್ಲಲ್ಲಿ ಭೂಕುಸಿತದೊಂದಿಗೆ, ಹೆದ್ದಾರಿಯ ನಡುವೆ ಮೂರ್ನಾಲ್ಕು ತಿಂಗಳು ವಾಹನ ಸಂಚಾರ ಸ್ಥಗಿತಗೊಂಡು, ಕೊನೆಗೂ ತಾತ್ಕಾಲಿಕವಾಗಿ ಕೇಂದ್ರ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಒಂದಿಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಅದೇ ರೀತಿ ಮಡಿಕೇರಿ - ಮೇಕೇರಿ ನಡುವೆಯೂ ಮೂರ್ನಾಡು ರಸ್ತೆ ಮಾರ್ಗ ಹಾನಿಗೊಂಡು, ದೈನಂದಿನ ಬಸ್‍ಗಳ ಸಹಿತ ಇತರ ವಾಹನಗಳ ಸಂಚಾರಕ್ಕೆ ತೊಡಕಾಗಿ ಜನ ಸಾಮಾನ್ಯರು ಕಷ್ಟ ಅನುಭವಿಸುವಂತಾಯಿತು. ಇನ್ನೊಂದೆಡೆ ಮಡಿಕೇರಿ - ಸುಂಟಿಕೊಪ್ಪ ಹಾಗೂ ಮಡಿಕೇರಿ - ಮಾದಾಪುರ ನಡುವೆ ಸೋಮವಾರಪೇಟೆ ಹೆದ್ದಾರಿಯ ಹಾಲೇರಿಯಲ್ಲಿ ಭಾರೀ ತೊಂದರೆ ಎದುರಾಗಿತ್ತು. ಇಂತಹ ಬಹುಪಾಲು ರಸ್ತೆಗಳನ್ನು ಎನ್‍ಡಿಆರ್‍ಎಫ್ ನಿಂದ ಸಾಕಷ್ಟು ಸರಿಪಡಿಸುವ ಕೆಲಸ, ತ್ವರಿತಗತಿಯಲ್ಲಿ ಕೈಗೊಳ್ಳಲಾಯಿತು. ಬಳಿಕ ಮಳೆಗಾಲವೂ ದೂರವಾಗು ವದರೊಂದಿಗೆ ಬೇಸಿಗೆ ಕಾಣಿಸಿ ಕೊಂಡಿದ್ದರಿಂದ ಕೊಡಗಿನಲ್ಲಿ ದೈನಂದಿನ ಜೀವನದತ್ತ ಮರಳುವಂತೆ ಬಾಸವಾಗತೊಡಗಿತು.

ಈಗ ಮಳೆ ಆಗಿಂದಾಗ್ಗೆ ಅಡ್ಡಮಳೆಯೊಂದಿಗೆ ಆಕಾಶದಲ್ಲಿ ಕಾರ್ಮೋಡ ಕಾಣಿಸುತ್ತಿದ್ದಂತೆಯೇ, ಜನವಲಯದಲ್ಲಿ ಏನೋ ಆತಂಕ, ದುಗುಡ, ತಳಮಳ ಆವರಿಸಿ ಕೊಳ್ಳುವಂತಾಗಿದೆ. ಕಾರಣ ಕಳೆದ ಮಳೆಗಾಲದ ಹೊಡೆತದಿಂದ ಇನ್ನು ಚೇತರಿಸಿಕೊಳ್ಳಲಾರದ ಸ್ಥಿತಿ ಒಂದೆಡೆ ಯಾದರೆ, ಅಲ್ಲಲ್ಲಿ ಭೂಕುಸಿತದಿಂದ ಹೆದ್ದಾರಿಯ ಬದಿಗಳಲ್ಲಿ ರಾಶಿಗಟ್ಟಲೆ ತುಂಬಿರುವ ಮಣ್ಣು ನೆಲಕಚ್ಚಿರುವ ಮರಗಳ ರಾಶಿ ಈ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹೀಗಾಗಿ, ಈಗಾಗಲೇ ತುಂಡರಿಸಲ್ಪಟ್ಟಿದ್ದ ಹೆದ್ದಾರಿಯ ಮರು ಜೋಡಣೆ, ಭೂಕುಸಿತದಿಂದ ಹಾನಿಗೊಂಡಿರುವ ರಸ್ತೆಗಳಿಗೆ ತಾತ್ಕಾಲಿಕ ಮರಳು ಮೂಟೆಯಿಂದ ರಿಪೇರಿ ಮಾಡಲಾಗಿದ್ದರೂ ಅದು ಶಾಶ್ವತವೆನಿಸದಾಗಿದೆ.ಇಂತಹ ರಸ್ತೆಗಳ ಕಾಮಗಾರಿ ಶಾಶ್ವತವಾಗುವ ದಿಸೆಯಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಕಾಳಜಿ ತೋರಬೇಕಿದೆ. ಇನ್ನೊಂದೆಡೆ ಆ ರಸ್ತೆಗಳ ಬದಿಯಲ್ಲಿರುವ ರಾಶಿ ರಾಶಿ ಮಣ್ಣು, ಕಲ್ಲು, ಮರ ಇತ್ಯಾದಿಗಳನ್ನು ಸುರಕ್ಷತಾ ಕ್ರಮವಾಗಿ ಸ್ಥಳಾಂತರಗೊಳಿಸಬೇಕಿದೆ. ಇಲ್ಲವಾದಲ್ಲಿ ಒಂದೆರಡು ಮಳೆ ಬೀಳುವಷ್ಟರಲ್ಲಿ ಮತ್ತೆ ಈ ಮಣ್ಣು ರಸ್ತೆಗಳನ್ನು ಆಕ್ರಮಿಸಿಕೊಂಡು ಹಿಂದಿನ ಸಾಲಿನ ಕಹಿ ಅನುಭವ ಮರುಕಳಿಸಲಿದೆ.(ಮೊದಲ ಪುಟದಿಂದ)

ಬೆಕ್ಕಿಗೆ ಚೆಲ್ಲಾಟ: ಒಂದು ರೀತಿ ರಾಜ್ಯ ರಾಜಕಾರಣವನ್ನು ಗಮನಿಸಿದರೆ, ಕೊಡಗಿನ ಜನತೆಯ ಸಂದಿಗ್ಧ ಬದುಕು ಇಲ್ಲಿ ಒಂದು ರೀತಿಯ ಮಟ್ಟಿಗೆ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎನ್ನುವ ಸ್ಥಿತಿಯಲ್ಲಿದೆ. ಕಾರಣ ಸರಕಾರದ ಯಾವದೇ ಪರಿಹಾರ ಕಾರ್ಯಗಳು ಮುಂದಿನ ಮುಂಗಾರು ಮುನ್ನಾ ಸಂತ್ರಸ್ತರಿಗೆ ಲಭಿಸುವ ಸ್ಥಿತಿಯಿಲ್ಲ. ರಾಜ್ಯದಲ್ಲಿ ಅತಂತ್ರ ರಾಜಕೀಯ ಬೆಳವಣಿಗೆಯಿಂದ ಕೊಡಗು ತೀರಾ ಕಡೆಗಣಿಸಲ್ಪಟ್ಟಿರುವ ಅನುಭವವಾಗತೊಡಗಿದೆ.

ಆಡಳಿತರೂಢ ಮೈತ್ರಿ ಸರಕಾರ ಮತ್ತು ವಿಪಕ್ಷ ಬಿಜೆಪಿ ಶಾಸಕರ ಧ್ವನಿಗೆ ಇಲ್ಲಿ ಕವಡೆ ಕಿಮ್ಮತ್ತಿನ ಬೆಲೆ ಸಿಗುತ್ತಿರುವ ಲಕ್ಷಣವಿಲ್ಲ; ಹೀಗಾಗಿ ಆಡಳಿತ ಯಂತ್ರಕ್ಕೂ ಚುರುಕು ಮುಟ್ಟಿಸುವವರಿಲ್ಲದೆ, ಆಡಳಿತ ವರ್ಗದ ಬಹುತೇಕ ಅಧಿಕಾರಿಗಳು ಹೊಸಬರಿದ್ದಾರೆ; ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಸಕಾಲದಲ್ಲಿ ಯಾವ ಕೆಲಸವೂ ಇಲ್ಲಿ ನಿರೀಕ್ಷೆಯಂತೆ ನಡೆಯದಾಗಿದೆ. ಆಡಳಿತ ಯಂತ್ರ ಮತ್ತು ಜನಪ್ರತಿನಿಧಿಗಳ ಕಾರ್ಯವೈಖದಿ ‘ಎತ್ತು ಏರಿಗೆ ಎಳೆದರೆ - ಕೋಣ ನೀರಿಗೆ ಎಳೆಯಿತು’ ಎಂಬಂತಾಗಿದೆ.

ಇಂತಹ ಪರಿಸ್ಥಿತಿಯ ನಡುವೆ ಕೊಡಗಿನ ಪ್ರಾಕೃತಿಕ ಸ್ಥಿತಿ ಜನ ಸಾಮಾನ್ಯರನ್ನು ಎಲ್ಲಾ ರೀತಿ ಕಂಗೆಡಿಸಿರುವದು ವಾಸ್ತವ. ಆ ನಿಟ್ಟಿನಲ್ಲಿ ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಧಿಗಳ ಸಹಿತ ಸಂಘ ಸಂಸ್ಥೆಗಳ ಜಂಟಿ ಸಭೆ ಆಯೋಜಿಸಿ ಭವಿಷ್ಯದೆಡೆಗೆ ಸಾಮೂಹಿಕ ಕ್ರಮಗಳತ್ತ ಕಾಳಜಿ ತೋರಬೇಕಿದೆ.