ಶಾಸಕ ಪ್ರೀತಂ ಗೌಡ ಮನೆ ಮೇಲೆ ಧಾಳಿ
ಬೆಂಗಳೂರು, ಫೆ. 13: ಹಾಸನ ಜೆಡಿಎಸ್ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತ ಧಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆ ಕುರಿತ ಆಡಿಯೋದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಿರುದ್ಧ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಆಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಮಾತುಗಳನ್ನು ವಿರೋಧಿಸಿ ಹಾಸನ ಶಾಸಕರ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿ, ಘೋಷಣೆ ಕೂಗಿ, ದಾಂಧಲೆ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರು ನಡೆಸಿದ ಕಲ್ಲು ತೂರಾಟದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಜೆಡಿಎಸ್ ಕಾರ್ಯಕರ್ತ ಪಡೆ ತೀವ್ರ ಆಕ್ರೋಶಗೊಂಡು ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಘೋಷಣೆ ಕೂಗಿತು. ಈ ಸಂದರ್ಭದಲ್ಲಿ ಪ್ರೀತಂ ಗೌಡ ಅವರ ತಂದೆ ಮತ್ತು ಮನೆಯಲ್ಲಿದ್ದರು ಎನ್ನಲಾಗಿದೆ. ಜೆಡಿಎಸ್ ಕಾರ್ಯಕರ್ತ ತೂರಿದ ದೊಡ್ಡ ಕಲ್ಲು ಬಿಜೆಪಿ ಕಾರ್ಯಕರ್ತನ ಮುಖಕ್ಕೆ ಬಡಿದಿದ್ದು, ಇದರಿಂದ ಅವರ ಕಣ್ಣಿನ ಭಾಗದಲ್ಲಿ ತೀವ್ರಗಾಯವಾಗಿ ರಕ್ತ ಸುರಿಯಿತು. ಈ ಬೆಳವಣಿಗೆ ಬಿಜೆಪಿ ಪಾಳಯವನ್ನು ಕರೆಳಿಸಿದ್ದು, ಹಾಸನದಲ್ಲೇ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ. ಶಾಸಕ ಪ್ರೀತಂ ಗೌಡ ವಿಧಾನಸೌಧದಲ್ಲಿ ಮಾತನಾಡಿ, ಈ ಘಟನೆಯಿಂದ ತಾವು ವಿಚಲಿತರಾಗಿಲ್ಲ. ತಮ್ಮನ್ನು ಮುಗಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಆದೇಶ ನೀಡಿದ್ದಾರೆ. ಇದನ್ನು ಸ್ವತಃ ಅಲ್ಲಿದ್ದ ಕಾರ್ಯಕರ್ತರೇ ಹೇಳಿದ್ದಾರೆ. ನನ್ನನ್ನು ಎಲ್ಲಿಯೇ ಇದ್ದರೂ ಹುಡುಕಿ ಬಿಡಬೇಡಿ ಎಂದು ಈ ಇಬ್ಬರು ತಮ್ಮ ಕಾರ್ಯಕರ್ತರಿಗೆ ನಿರ್ದೇಶನ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
16ನೇ ಲೋಕಸಭಾ ಅಧಿವೇಶನಕ್ಕೆ ವಿದಾಯ
ನವದೆಹಲಿ, ಫೆ. 13: 16ನೇ ಲೋಕಸಭೆಯನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಭಾವುಕರಾಗಿ, ಕಳೆದ 5 ವರ್ಷಗಳಲ್ಲಿ ಸದನದ ಕಾರ್ಯ ನಿರ್ವಹಣೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ತಿಳಿಸಿದರು. ಬಜೆಟ್ ಅಧಿವೇಶನದ ಕೊನೆಯ ದಿನವಾದ ಬುಧವಾರ ತಮ್ಮ ಸಮಾರೋಪ ಭಾಷಣದಲ್ಲಿ ಮಾತನಾಡಿದ ಅವರು, 16ನೇ ಲೋಕಸಭೆ ಅವಧಿಯಲ್ಲಿ ಅನೇಕ ಐತಿಹಾಸಿಕ ಸನ್ನಿವೇಶಗಳು ನಡೆದಿವೆ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ಸದನದ ಮಾಜಿ ಸದಸ್ಯರನ್ನು ಸುಮಿತ್ರಾ ಮಹಾಜನ್ ಸ್ಮರಿಸಿದರು. 16ನೇ ಲೋಕಸಭೆ 2014ರ ಮೇ 18 ರಂದು ರಚನೆಗೊಂಡಿದ್ದು, ಮೊದಲ ಕಾರ್ಯಕಲಾಪ 2014ರ ಜೂನ್ 4 ರಂದು ನಡೆದಿತ್ತು. ಸದನದಲ್ಲಿ ಇದವರೆಗೆ 331 ದಿನಗಳ ಕಾರ್ಯಕಲಾಪ ನಡೆದಿದೆ ಎಂದು ಅವರು ಹೇಳಿದರು. 16ನೇ ಲೋಕಸಭೆ ಅವಧಿಯಲ್ಲಿ 219 ಮಸೂದೆಗಳನ್ನು ಮಂಡಿಸಲಾಗಿದೆ. ಇವುಗಳಲ್ಲಿ, ಕಪ್ಪು ಹಣ ನಿಗ್ರಹ ಮಸೂದೆ-2015, ದಿವಾಳಿ ಸಂಹಿತೆ-2016 ಪ್ರಮುಖವಾಗಿವೆ.
ಲೋಕಸಭೆಯಲ್ಲಿ ಭೂಕಂಪÀವಾಗಿಲ್ಲವೆಂದ ಮೋದಿ
ನವದೆಹಲಿ, ಫೆ. 13: ರಾಫೆಲ್ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎನ್ನಲಾಗಿತ್ತು, ಆದರೆ ನನಗೆ ಅಂತಹದ್ದೇನೂ ಕಾಣಲಿಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಹದಿನಾರನೇ ಲೋಕಸಭೆ ಅಧಿವೇಶನದ ಅಂತಿಮ ದಿನದ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ ರಾಫೆಲ್ ವಿವಾದ ಕುರಿತು ರಾಹುಲ್ ಗಾಂಧಿ ತಾವು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹಿಂದೊಮ್ಮೆ ಹೇಳಿದ್ದರು. ಆದರೆ ಅಂತಹದೇನೂ ಆಗಲಿಲ್ಲ. ಎಂದಿದ್ದಾರೆ. ಚುನಾವಣೆಯಲ್ಲಿ ಎನ್‍ಡಿಎಗೆ ಬಹುಮತ ಸಿಕ್ಕ ಈ ಐದು ವರ್ಷಗಳಲ್ಲಿ ಭಾರತದ ಗೌರವ ಜಾಗತಿಕ ಮಟ್ಟದಲ್ಲಿ ವೃದ್ದಿಸಿದೆ. ಇದುವೇ ದೇಶದ ಅಭಿವೃದ್ದಿಗೆ ಸಹ ಕಾರಣವಾಗಿದೆ. ಪ್ರಧಾನಿ ಮಾತನಾಡುವ ವೇಳೆ ರಾಹುಲ್ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ. ರಾಫೆಲ್ ಬಗ್ಗೆ ರಾಹುಲ್ ಟೀಕೆಗಳನ್ನು ಉಲ್ಲೇಖಿಸಿದ ಪ್ರಧಾನಿ ರಾಹುಲ್ ಓರ್ವ ಸಂಸದರು, ಆದರೆ ಅವರು ನನ್ನನ್ನು ತಬ್ಬಿಕೊಂಡದ್ದು, ಕಣ್ಣು ಹೊಡೆದದ್ದು ಎಲ್ಲವೂ ಓರ್ವ ಸಂಸತ್ ಸದಸ್ಯರ ಕಡೆಯಿಂದ ಇದೇ ಮೊದಲ ಬಾರಿಗೆ ನೊಡಿದ್ದೇನೆ ಎಂದರು.
ರೇಪ್ ಹೇಳಿಕೆ : ಕ್ಷಮೆ ಕೋರಿದ ಸ್ಪೀಕರ್
ಬೆಂಗಳೂರು, ಫೆ. 13: ವಿಧಾನಸಭೆಯಲ್ಲಿ ತಮ್ಮ ಪರಿಸ್ಥಿತಿ ರೇಪ್‍ಗೆ ಒಳಗಾದ ಮಹಿಳೆಯಂತಾಗಿದೆ ಎಂದು ಹೇಳಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರು ಬುಧವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದು, ರೇಪ್ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ವಿಶೇಷವಾಗಿ ಮಹಿಳೆಯರಿಗೆ ನೋವಾಗಿದ್ದರೆ, ಅಥವಾ ಅವಮಾನವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಮಹಿಳೆಯರ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ನನಗೆ ಇಲ್ಲ ಎಂದು ಸ್ಪೀಕರ್ ಹೇಳಿದರು. ಶಾಸಕಿಯರಾದ ಅನಿತಾ ಕುಮಾರಸ್ವಾಮಿ, ಅಂಜಲಿ ನಿಂಬಾಳ್ಕರ್ ರೂಪಕಲಾ ಶಶಿಧರ್, ಲಕ್ಷ್ಮಿ ಹೆಬ್ಬಾಳ್ಕರ್, ಫಾತಿಮಾ, ಸೌಮ್ಯ ರೆಡ್ಡಿ ಹಾಗೂ ವಿನಿಶಾ ಅವರು ನನ್ನನ್ನು ಭೇಟಿ ಮಾಡಿ ರೇಪ್ ಸಂತ್ರಸ್ಥೆ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಸ್ಪೀಕರ್ ಸದನಕ್ಕೆ ತಿಳಿಸಿದರು. ನಿನ್ನೆ ಸದನದಲ್ಲಿ ಆಪರೇಷನ್ ಕಮಲ ಆಡಿಯೋ ಟೇಪ್‍ಗೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಪದೇ ಪದೆ ತಮ್ಮ ಹೆಸರು ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿ, ತಮ್ಮ ಪರಿಸ್ಥಿತಿ ರೇಪ್ ಸಂತ್ರಸ್ಥೆಯಂತಾಗಿದೆ ಎಂದು ಸ್ಪೀಕರ್ ಚಟಾಕಿ ಹಾರಿಸಿದ್ದರು.
ಏಳು ಬ್ಯಾಂಕ್‍ಗಳಿಗೆ ಆರ್‍ಬಿಐ ದಂಡ
ಮುಂಬೈ, ಫೆ. 13: ವಿವಿಧ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಹೆಚ್‍ಡಿಎಫ್‍ಸಿ, ಕೋಟಾಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಏಳು ಬ್ಯಾಂಕ್‍ಗಳಿಗೆ ಆರ್‍ಬಿಐ ದಂಡ ವಿಧಿಸಿದೆ. ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್ ಸೀಸಿ ಬ್ಯಾಂಕ್‍ಗಳು ಆರ್‍ಬಿಐ ನಿಧಿ ಬಳಕೆ, ಮೇಲ್ವಿಚಾರಣೆಯಲ್ಲಿ ವಂಚನೆ ಸೇರಿ ಹಲವು ನಿಯಮಗಳ ಉಲ್ಲಂಘನೆಗಾಗಿ ರೂ. 1.5 ಕೋಟಿ ದಂಡ ವಿಧಿಸಿದೆ. ಇದೇ ರೀತಿಆಂಧ್ರ ಬ್ಯಾಂಕ್‍ಗೆ ರೂ. 1 ಕೋಟಿ ದಂಡ ವಿಧಿಸಲಾಗಿದೆ. ಇನ್ನು ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮಾನದಂಡಗಳನ್ನು ಮತ್ತು ಅಕ್ರಮ ಹಣ ವರ್ಗಾವಣೆ ಸಂಬಂಧ ಹೆಚ್‍ಡಿಎಫ್‍ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್ ಮತ್ತು ಕೋಟಾಕ್ ಮಹೀಂದ್ರಾ ಬ್ಯಾಂಕ್‍ಗಳಲ್ಲಿ ರೂ. 20 ಲಕ್ಷ ದಂಡ ಹಾಕಲಾಗಿದೆ.
ಅತೃಪ್ತ ಶಾಸಕರು ಕಲಾಪಕ್ಕೆ ಹಾಜರು
ಬೆಂಗಳೂರು, ಫೆ. 13: ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಭಾವಿಸಲಾಗಿದ್ದ ಕಾಂಗ್ರೆಸ್‍ನ ನಾಲ್ಕು ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹಾಂತೇಶ್ ಕಮಟಳ್ಳಿ, ಬಿ. ನಾಗೇಂದ್ರ ಹಾಗೂ ಜೆಡಿಎಸ್ ನಾರಾಯಣಗೌಡ ಅವರು ಬುಧವಾರ ಕೊನೆಗೂ ವಿಧಾನಸಭೆ ಕಲಾಪಕ್ಕೆ ಹಾಜರಾದರು. ಅಧಿವೇಶನ ಆರಂಭವಾದ ದಿನದಿಂದ ಕಲಾಪದಿಂದ ದೂರ ಉಳಿದಿದ್ದ ಈ ಶಾಸಕರು ಇಂದು ಪ್ರತ್ಯಕ್ಷರಾದರು. ಆದರೆ ಅವರ ನಡೆ ಇನ್ನೂ ನಿಗೂಢವಾಗಿಯೇ ಇದೆ. ಪಕ್ಷದ ಶಾಸಕಾಂಗ ಸಭೆ, ಅಧಿವೇಶನಕ್ಕೆ ಗೈರು ಹಾಜರಾಗಿದ್ದ ಈ ನಾಲ್ವರು ಕಾಂಗ್ರೆಸ್ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ ನಂತರ ಅನರ್ಹತೆ ಭೀತಿಯಿಂದ ಈ ಶಾಸಕರು ಇಂದು ಅಧಿವೇಶನದಲ್ಲಿ ಪಾಲ್ಗೊಂಡರು. ಅತೃಪ್ತ ಶಾಸಕ ನಾಗೇಂದ್ರ ಮಾತನಾಡಿ, ತಮಗೆ ಅಸಮಾಧಾನ ಇರುವುದು ನಿಜ, ಈ ಬಗ್ಗೆ ಹೈಕಮಾಂಡ್ ಜತೆ ಮಾತುಕತೆ ನಡೆಸುತ್ತೇನೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಸದನಕ್ಕೆ ಆಗಮಿಸಿದ್ದೇನೆ. ಶಾಸಕತ್ವ ಅನರ್ಹತೆ ದೂರು ಸಂಬಂಧ ಸಿದ್ದರಾಮಯ್ಯ ಅವರ ಜತೆಯೂ ಮಾತನಾಡುವದಾಗಿ ಹೇಳಿದರು.