ಸೋಮವಾರಪೇಟೆ,ಫೆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ‘ಸಾವು’ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ.

ನಯನ ಮನೋಹರವಾಗಿದ್ದರೂ, ಅತಿ ಅಪಾಯಕಾರಿಯಾಗಿರುವ ಮಲ್ಲಳ್ಳಿ ಜಲಪಾತದಲ್ಲಿ ಪ್ರವಾಸಿಗರು ಇಳಿದು ಸಾವನ್ನಪ್ಪುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ಪ್ರವಾಸೋದ್ಯಮ ಇಲಾಖೆಯಿಂದ ಕಬ್ಬಿಣದ ಸರಳುಗಳನ್ನು ಅಳವಡಿಸಿ ಬೇಲಿ ನಿರ್ಮಿಸಿದ್ದರೂ ಸಹ ಅದನ್ನೂ ದಾಟಿ ಕೆಲವರು ಜಲಪಾತದ ತಳಭಾಗಕ್ಕೆ ಇಳಿಯುತ್ತಿದ್ದು, ಆಯತಪ್ಪಿ ಕೆಳಬಿದ್ದು ನೀರುಪಾಲಾಗುತ್ತಿದ್ದಾರೆ.

ಕಳೆದ ವಾರವಷ್ಟೇ ಜಲಪಾತದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಲು ತೆರಳಿದ ಪ್ರತಿಷ್ಠಿತ ಕಂಪೆನಿಯೊಂದರ ಉದ್ಯೋಗಿ ಸ್ಕಂದ ಎಂಬಾತ ಜಲಪಾತದಲ್ಲಿ ಸಾವನ್ನಪ್ಪುವ ಮೂಲಕ ಈವರೆಗೆ 14 ಮಂದಿ ಜಲಪಾತಕ್ಕೆ ಬಲಿಯಾದಂತಾಗಿದ್ದು, ಮುಂದಿನ ದಿನಗಳಲ್ಲಾದರೂ ಸಾವುಗಳು ಸಂಭವಿಸದಿರಲಿ ಎಂಬ ಕಾಳಜಿಯಿಂದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಜಲಪಾತದ ಮೇಲ್ಭಾಗ ಮತ್ತು ತಳಭಾಗದಲ್ಲಿ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ.

“ಜಾರುವ ಕಲ್ಲು, ಸುಳಿ ಹಾಗೂ ಊಹಿಸಲಾಗದ ಮಟ್ಟಕ್ಕೆ ಆಳವಿರುವ ಕಾರಣ ಈಗಾಗಲೇ ಜಲಪಾತಕ್ಕೆ ಇಳಿದು ಸಾವನ್ನಪ್ಪಿರುವವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಪ್ರವಾಸಿಗರು ಜಲಪಾತದೊಳಗೆ ಇಳಿದು ತಮ್ಮ ಅಮೂಲ್ಯವಾದ ಜೀವವನ್ನು ಹಾಳುಮಾಡಿ ಕೊಳ್ಳುವದಲ್ಲದೇ ತಮ್ಮ ತಂದೆ, ತಾಯಿ, ಕುಟುಂಬವನ್ನು ಅನಾಥರನ್ನಾಗಿಸಬಾರದಾಗಿ ವಿನಂತಿ; ಪರಿಸರದ ಸ್ವಚ್ಛತೆ ಕಾಪಾಡಿ-ಛಾಯಾಚಿತ್ರ ತೆಗೆಯುವಾಗ ಎಚ್ಚರವಿರಲಿ- ಈವರೆಗಿನ ಸಾವಿನ ಸಂಖ್ಯೆ ಒಟ್ಟು 14” ಎಂಬ ಎಚ್ಚರಿಕೆಯ ಸಂದೇಶ ಇರುವ ಫಲಕವನ್ನು ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಅಳವಡಿಸಲಾಗಿದೆ.

ಅಸೋಸಿಯೇಷನ್‍ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಸದಸ್ಯರುಗಳಾದ ಮೋಹಿತ್ ತಿಮ್ಮಯ್ಯ, ಹರ್ಷಿತ್, ಆದರ್ಶ್ ತಮ್ಮಯ್ಯ, ವಿನಯ್, ಸಜನ್, ಸ್ವಾಗತ್, ಶ್ರೇಯಸ್, ಅಭಿಷೇಕ್ ಅವರುಗಳು ನೂತನ ಫಲಕವನ್ನು ಅಳವಡಿಸಿ, ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.