ಮಡಿಕೇರಿ, ಫೆ. 12: ಕೊಡಗು ಜಿಲ್ಲೆ ಕಳೆದ ಹಲವು ತಿಂಗಳ ಹಿಂದೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಕ್ಷಿಪ್ರಗತಿಯಲ್ಲಿ ಬೆಳೆವಣಿಗೆ ಕಾಣುತ್ತಿದ್ದ ಪ್ರವಾಸೋದ್ಯಮವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಾರ್ಯಚಟುವಟಿಕೆಗಳು, ಆರ್ಥಿಕ ವಹಿವಾಟಿನ ಮೇಲೆ ಗದಾಪ್ರಹಾರವಾದಂತಾಗಿರುವದು ಎಲ್ಲರಿಗೂ ಅರಿವಿದೆ. ಜಿಲ್ಲೆಯಲ್ಲಿ ಈ ಪ್ರಾಕೃತಿಕ ವಿಕೋಪದಿಂದಾಗಿ ಕುಸಿದಿರುವ ಪ್ರವಾಸೋದ್ಯಮವನ್ನು ಮೇಲೆತ್ತಲು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೊಡಗಿನ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಮಾಹಿತಿ ನೀಡಿದ್ದಾರೆ.ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಪ್ರಸ್ತುತದ ಅಧಿವೇಶನದಲ್ಲಿ ಈ ಕುರಿತಾಗಿ ಪ್ರಶ್ನೆಯನ್ನು ಮುಂದಿಟ್ಟಿದ್ದು, ಇದಕ್ಕೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.ಪ್ರಚಾರ ಕಾರ್ಯಕ್ಕೆ ರೂ. 2.63 ಕೋಟಿ

ಪ್ರವಾಸೋದ್ಯಮದ ಬೆಳವಣಿಗೆ ಹಾನಿಯಾಗಿದ್ದರೂ ಕೂಡ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಲು ಯಾವದೇ ತೊಂದರೆ ಇಲ್ಲ ಎಂಬದನ್ನು ಮನದಟ್ಟು ಮಾಡಲು, ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸಲು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ವಿವಿಧ ರೇಡಿಯೋ, ಚಾನೆಲ್, ಡಿಜಿಟಲ್ ಮೀಡಿಯಾ, ಸಿನಿಮಾ ಥಿಯೇಟರ್, ದಿನ ಪತ್ರಿಕೆಗಳು ಹಾಗೂ ಮ್ಯಾಗಜಿನ್‍ಗಳಲ್ಲಿ ಒಟ್ಟು ರೂ. 2,63,21,746 ವೆಚ್ಚದಲ್ಲಿ ಜಾಹೀರಾತು ನೀಡಿ ಪ್ರಚಾರ ಕಾರ್ಯಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗಿದೆಯಂತೆ.ಇದರೊಂದಿಗೆ ಪ್ರಕೃತಿ ವಿಕೋಪದಿಂದ ಹಾಳಾಗಿದ್ದ ಪ್ರವಾಸಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಮೂಲಕ ದುರಸ್ತಿ ಪಡಿಸಿ (ತಡಿಯಂಡ ಮೋಳ್ ಹೊರತು ಪಡಿಸಿ) ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಪ್ರವಾಸೋದ್ಯಮ ನಿಗಮದಿಂದ ಮೂರು ಮಿನಿ ಬಸ್‍ಗಳನ್ನು ಕೊಡಗು ದರ್ಶನಕ್ಕೆ ಬಳಸಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದು ಸಚಿವರು ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ಬೆಂಗಳೂರ, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕೊಡಗು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರವಾಸಿಗರು ಭೇಟಿ ನೀಡುವಂತೆ ಜಾಹೀರಾತು ನೀಡಲಾಗುತ್ತಿದೆ. ಇದೇ ನಿಟ್ಟಿನಲ್ಲಿ 8.12.2018 ರಂದು ಚೆನ್ನೈಯಲ್ಲಿ ಖಾಸಗಿ ಸ್ಟೇಕ್ ಹೋಲ್ಡರ್‍ಗಳನ್ನು ಒಳಗೊಂಡ ಬಿ2ಬಿ ಸಭೆ ಹಾಗೂ ರೋಡ್ ಶೋ ಅನ್ನು ಆಯೋಜಿಸಲು ಕ್ರಮ ವಹಿಸಲಾಗಿತ್ತು. ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯಲು ಮೂರು ದಿನಗಳ ಉತ್ಸವವನ್ನು ಏರ್ಪಡಿಸಲಾಗಿತ್ತು ಎಂದು ವಿವರಿಸಲಾಗಿದೆ.

ತಾಣಗಳ ಅಭಿವೃದ್ಧಿಗೆ ರೂ. 6 ಕೋಟಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನ, ಪೂರ್ಣಗೊಂಡಿರುವ ಕಾಮಗಾರಿಗಳು ಹಾಗೂ ಅವು ಯಾವುವು ಎಂಬ ಬಗ್ಗೆಯೂ ಉತ್ತರ ನೀಡಲಾಗಿದೆ. ಇದರಂತೆ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ರೂ. 609.90 ಲಕ್ಷ (6.09 ಕೋಟಿ)ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ.

ಪ್ರಕೃತಿ ವಿಕೋಪದಿಂದ ಹಾಳಾಗಿದ್ದ ಪ್ರವಾಸಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳ ಮೂಲಕ ದುರಸ್ತಿ ಪಡಿಸಿ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಲಾಗಿದೆ.

ಪ್ರಗತಿ ಹಂತದಲ್ಲಿರುವ ಕಾಮಗಾರಿಗಳ ವಿವರ

ಶ್ರೀ ಓಂಕಾರೇಶ್ವರ ದೇವಸ್ಥಾನ ಬಳಿ ಶೌಚಾಲಯ ಮತ್ತು ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ (ಅಂದಾಜು ಮೊತ್ತ ರೂ. 36.60 ಲಕ್ಷ) ಮಡಿಕೇರಿ ತಾಲೂಕಿನ ನಾಲ್ಕುನಾಡು ಅರಮನೆಗೆ ಸಂಪರ್ಕ ರಸ್ತೆ ಅಭಿವೃದ್ಧಿ (ಸಿ.ಸಿ. ರಸ್ತೆ ಅಂದಾಜು ಮೊತ್ತ 300 ಲಕ್ಷ) ಇರ್ಪು ಜಲಪಾತ ಪ್ರವಾಸಿ ತಾಣದಲ್ಲಿ ಪಾರ್ಕಿಂಗ್ ಹಾಗೂ ಉದ್ಯಾನವನ ನಿರ್ಮಾಣ (ಅಂದಾಜು ಮೊತ್ತ ರೂ. 50 ಲಕ್ಷ) ಹಾಗೂ ಸೋಮವಾರಪೇಟೆ ತಾಲೂಕಿನ ದುಬಾರೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ತೂಗುಸೇತುವೆ ನಿರ್ಮಾಣ (ಅಂದಾಜು ಮೊತ್ತ ರೂ. 223.30 ಲಕ್ಷ) ಸೇರಿದಂತೆ ಒಟ್ಟು ರೂ. 6.09 ಕೋಟಿಯಷ್ಟು ಮೊತ್ತದ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆಯಂತೆ.