ಆಡಿಯೋ ಪ್ರಕರಣ : ಇಂದು ಮಹತ್ವದ ಸಭೆ

ಬೆಂಗಳೂರು, ಫೆ. 12: ಆಪರೇಷನ್ ಕಮಲ ಕುರಿತ ಆಡಿಯೋ ಪ್ರಕರಣದ ಬಗ್ಗೆ ಎಸ್‍ಐಟಿ ತನಿಖೆಗೆ ಪ್ರತಿಪಕ್ಷ ಬಿಜೆಪಿ ಎರಡನೇ ದಿನವೂ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಸರ್ಕಾರ ಎಸ್‍ಐಟಿ ತನಿಖೆಯ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದೆ. ಹೀಗಾಗಿ ಮಂಗಳವಾರ ಇಡೀ ದಿನ ವಿಧಾನಸಭೆಯಲ್ಲಿ ಭಾರೀ ವಾದ, ಪ್ರತಿವಾದ ನಡೆಯಿತು. ಅಂತಿಮವಾಗಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಬುಧವಾರ ಬೆಳಿಗ್ಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಡಳಿತ ಮತ್ತು ಪ್ರತಿಪಕ್ಷ ಮುಖಂಡರ ಸಭೆ ಕರೆದಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ. ಇಂದು ವಿಧಾಸಭೆಯಲ್ಲಿ ಬಿಜೆಪಿ ನಾಯಕರು ಈ ಪ್ರಕರಣದ ಬಗ್ಗೆ ಸದನ ಸಮಿತಿ ರಚಿಸಿ, ಇಲ್ಲವಾದಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಸ್ವತಃ ಮುಖ್ಯಮಂತ್ರಿ ಆರೋಪಿ ಸ್ಥಾನದಲ್ಲಿದ್ದು, ಅವರು ತನಿಖಾ ಸಂಸ್ಥೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಬಲವಾಗಿ ವಾದ ಮಂಡಿಸಿದರು. ಭೋಜನ ವಿರಾಮಕ್ಕೂ ಮುನ್ನ ಹಾಗೂ ನಂತರ ಇಡೀ ದಿನ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮೌನವಾಗಿದ್ದ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಂಜೆ ವೇಳೆಗೆ ತಮ್ಮ ಎಂದಿನ ಲಯಕ್ಕೆ ಮರಳಿ ತಾವು ಸ್ಪೀಕರ್ ಬಗ್ಗೆ ಆಡಿಯೋದಲ್ಲಿ ಮಾತನಾಡಿರುವದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವದಾಗಿ ಮತ್ತೊಮ್ಮೆ ಸವಾಲು ಹಾಕಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮಗೆ ಇಷ್ಟ ಬಂದ ಹಾಗೆ ಆಡಿಯೋ ಎಡಿಟ್ ಮಾಡಿದ್ದಾರೆ. ಸಾಕಷ್ಟು ಅಂಶಗಳನ್ನು ಕಂಟ್ ಅಂಡ್ ಪೇಸ್ಟ್ ಮಾಡಿದ್ದಾರೆ. ಆಡಿಯೋವನ್ನು ಎರಡು ಮೂರು ನಿಮಿಷಗಳಿಗೆ ಇಳಿಸಿದ್ದಾರೆ ಎಂದು ಆಪಾದಿಸಿದರು.

ಹೆಸರಿನ ಮುಂದೆ ಭಾರತರತ್ನ ಬಳಸುವಂತ್ತಿಲ್ಲ

ನವದೆಹಲಿ, ಫೆ. 12: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಹಾಗೂ ಪದ್ಮ ಪ್ರಶಸ್ತಿಗಳು ಬಿರುದುಗಳಲ್ಲ. ಹೀಗಾಗಿ ಅವುಗಳನ್ನು ಹೆಸರಿನ ಹಿಂದೆ ಅಥವಾ ಮುಂದೆ ಬಳಸುವಂತಿಲ್ಲ. ಒಂದು ವೇಳೆ ದುರ್ಬಳಕೆ ಮಾಡಿಕೊಂಡರೆ ಪ್ರಶಸ್ತಿಗಳನ್ನು ಹಿಂಪಡೆಯಲಾಗುವದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್ ಅವರು, ರಾಷ್ಟ್ರೀಯ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಗೌರವಗಳು ಬಿರುದುಗಳಲ್ಲ. ಹೀಗಾಗಿ ಅವುಗಳನ್ನು ಪ್ರಶಸ್ತಿ ಪುರಸ್ಕೃತರ ಹೆಸರಿನ ಹಿಂದೆ ಅಥವಾ ಮುಂದೆ ಬಳಸುವಂತಿಲ್ಲ ಎಂದು ಹೇಳಿದರು. ಈ ರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ವೀಕರಿಸುವ ಪ್ರತಿ ವ್ಯಕ್ತಿಗಳಿಗೆ (ಮರಣೋತ್ತರ ಹೊರತುಪಡಿಸಿ) ಪ್ರಶಸ್ತಿಯ ನಿಮಯಗಳ ಬಗ್ಗೆ ತಿಳಿಸಲಾಗುತ್ತದೆ ಮತ್ತು ಹೆಸರಿನ ಹಿಂದೆ ಅಥವಾ ಮುಂದೆ ಬಳಸದಂತೆ ಸೂಚಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಶಸ್ತಿಗಳನ್ನು ದುರುಪಯೋಗ ಪಡಿಸಿಕೊಂಡರೆ ಆ ವ್ಯಕ್ತಿಯೂ ರಾಷ್ಟ್ರೀಯ ಪ್ರಶಸ್ತಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅಹಿರ್ ಅವರು ಹೇಳಿದ್ದಾರೆ.

ಪಾಕ್ ಹೇಯ ಕೃತ್ಯದ ವೀಡಿಯೋ ಹಂಚಿಕೆ

ಬಲೋಚಿಸ್ತಾನ್, ಫೆ. 12: ಪಾಕಿಸ್ತಾನ ಸೇನೆ, ಯಾವದೇ ಶಸ್ತ್ರಗಳಿಲ್ಲದ ಬಲೋಚಿಸ್ತಾನದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ವೀಡಿಯೋವೊಂದನ್ನು ಮುಕ್ತ ಬಲೋಚಿಸ್ತಾನ್ ಚಳವಳಿಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ. ರಾಜಕೀಯ ಕಾರ್ಯಕರ್ತ ಬೀಬಗರ್ ಬಲೋಚ್ ಅವರು ಈ ವೀಡಿಯೋವನ್ನು ಟ್ವಿಟ್ಟರ್‍ನಲ್ಲಿ ಷೇರ್ ಮಾಡಿದ್ದು, ಪಾಕಿಸ್ತಾನ ಸೇನೆ ವ್ಯಕ್ತಿಯೊಬ್ಬನನ್ನು ಮನೆಯಿಂದ ಹೊರೆ ಎಳೆದು ತಂದು, ಆತನ ಮೇಲೆ ಅಮಾನವೀಯ ರೀತಿಯಲ್ಲಿ ನಿರಂತರ ಗುಂಡಿನ ಧಾಳಿ ನಡೆಸುತ್ತಾರೆ. ಈ ಭೀಕರ ಘಟನೆಗೆ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಪಾಕ್ ಸೇನೆ ಹಾಗಾಗ ಇಂತಹ ಕೃತ್ಯಗಳನ್ನು ಎಸಗುತ್ತಿದ್ದು, ಇದನ್ನು ಖಂಡಿಸಿ ಬಲೋಚ್ ರಿಪಬ್ಲಿಕ್ ಪಾರ್ಟಿ, ಬಲೋಚ್ ನ್ಯಾಷನ್ ಮೂಮೆಂಟ್ ಮತ್ತು ಫ್ರೀ ಬಲೋಚಿಸ್ತಾನ್ ಮೂಮೆಂಟ್ ಹಾಗೂ ಇತರೆ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿವೆ.

ಒಪ್ಪಂದಕ್ಕೂ, ರಾಫೆಲ್ ಡೀಲ್‍ಗೂ ಸಂಬಂಧವಿಲ್ಲ

ನವದೆಹಲಿ, ಫೆ. 12: ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್, ಉದ್ದೇಶಿತ ಒಪ್ಪಂದಕ್ಕೂ ಮತ್ತು ರಾಫೆಲ್ ಡೀಲ್‍ಗೂ ಯಾವದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿ ಪ್ರಸ್ತಾಪಿಸಿರುವ ಒಪ್ಪಂದ ಏರ್ ಬಸ್ ಹೆಲಿಕಾಪ್ಟರ್‍ಗೆ ಸಂಬಂಧಿಸಿದ್ದು, ಅದಕ್ಕು ಯುದ್ಧ ವಿಮಾನದ ಒಪ್ಪಂದಕ್ಕೂ ಯಾವದೇ ಸಂಬಂಧ ಇಲ್ಲ ಎಂದು ರಿಲಯನ್ಸ್ ಡಿಫೆನ್ಸ್ ವಕ್ತಾರರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಉಲ್ಲೇಖಿಸಿರುವ ಇ-ಮೇಲ್‍ನಲ್ಲಿ, ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಿವಿಲ್ ಮತ್ತು ಡಿಫೆನ್ಸ್ ಹೆಲಿಕಾಪ್ಟರ್‍ಗೆ ಸಂಬಂಧಿಸಿದಂತೆ ಏರ್ ಬಸ್ ಹಾಗೂ ರಿಲಯನ್ಸ್ ಡಿಫೆನ್ಸ್ ಮಧ್ಯ ಚರ್ಚೆ ನಡೆದಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಅವರ ವರ್ತನೆಯನ್ನುಗಮನಿಸಿದರೆ ಅವರು ಅನಿಲ್ ಅಂಬಾನಿ ಅವರ ಮಧ್ಯವರ್ತಿಯಂತೆ ವರ್ತಿಸುತ್ತಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಇ-ಮೇಲ್‍ನಲ್ಲಿ ಅನಿಲ್ ಅಂಬಾನಿ ಪ್ರೆಂಚ್ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದೂ ಕೂಡ ಕೇಂದ್ರ ಸರ್ಕಾರ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕುವ 10 ದಿನಗಳ ಮೊದಲೇ. ಕೇಂದ್ರ ಸರ್ಕಾರ ಇಂತಹುದೊಂದು ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಅನಿಲ್ ಅಂಬಾನಿಗೆ ಮೊದಲೇ ತಿಳಿದಿತ್ತೇ..? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕುರಿತ ಇ-ಮೇಲ್ ದಾಖಲೆಯೊಂದನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.

ಅನುಮೋದನೆ ಇಲ್ಲದೆ ರೂ. 1157 ಕೋಟಿ ಖರ್ಚು

ನವದೆಹಲಿ, ಫೆ. 12: ಹಣಕಾಸು ಸಚಿವಾಲಯ 2017-18ರ ಅವಧಿಯಲ್ಲಿ ಸಂಸತ್ತಿನ ಅನುಮೋದನೆ ಪಡೆಯದೇ ರೂ. 1157 ಕೋಟಿ ಖರ್ಚು ಮಾಡಿದೆ ಎಂದು ಮಹಾಲೇಖ ಮತ್ತು ಲೆಕ್ಕಪರಿಶೋಧಕ (ಸಿಎಜಿ) ವರದಿ ತಿಳಿಸಿದೆ. ಸಿಎಜಿ ವರದಿಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಸಂಸತ್ತಿನ ಅನುಮೋದನೆ ಪಡೆಯದೆ 2017-18ರ ಅವಧಿಯಲ್ಲಿ ರೂ. 1,156.80 ಕೋಟಿಗಳನ್ನು ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಕೇಂದ್ರ ಸರ್ಕಾರದ ಹಣಕಾಸು ಲೆಕ್ಕ ಪರಿಶೋಧನಾ ವರದಿ ಹೇಳಿದೆ. ಹಣಕಾಸು ಸಚಿವಾಲಯ ಹೊಸ ಸೇವಾ / ಹೊಸ ಸಲಕರಣೆಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಲಿಲ್ಲ, ಇದು ಹೆಚ್ಚುವರಿ ಖರ್ಚಿಗೆ ಕಾರಣವಾಯಿತು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಹೆಚ್ಚುವರಿ ವೆಚ್ಚಕ್ಕೆ ಶಾಸಕಾಂಗದ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ ಎಂದು ವರದಿ ತಿಳಿಸಿದೆ. ಇನ್ನು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಫೆಲ್ ಒಪ್ಪಂದದ ಕುರಿತು ಸಿಎಜಿ ವರದಿಯ ವಿವರ ಇನ್ನು ಲಭ್ಯವಾಗಿಲ್ಲ.

ನೂರು ಗಿಟಾರ್‍ಗಳಲ್ಲಿ ರಾಷ್ಟ್ರಗೀತೆಯ ದಾಖಲೆÉ

ಬೆಳಗಾವಿ, ಫೆ. 12: ನೂರು ಗಿಟಾರ್‍ಗಳಲ್ಲಿ ಭಾರತ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಬೆಳಗಾವಿಯ ಕೆಎಲ್‍ಇ ಇಂಟರ್ ನ್ಯಾಷನಲ್ ಸ್ಕೂಲ್‍ನ ವಿದ್ಯಾರ್ಥಿಗಳು ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬೆಳಗಾವಿ ಕುವೆಂಪು ನಗರದಲ್ಲಿರುವ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯಲ್ಲಿನ ಏಳರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳು ನೂರು ಗಿಟಾರ್‍ನಲ್ಲಿ ಏಕಕಾಲಕ್ಕೆ ರಾಷ್ಟ್ರಗೀತೆ ನುಡಿಸುವದರೊಡನೆ ಇಂಡಿಯಾ ವಲ್ರ್ಡ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದ್ದಾರೆ. ಪ್ರಸಿದ್ಧ ಸಂಗೀತ ಕಲಾವಿದ ವಿಶಾಲ್ ಸಿಂಗ್ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು ಮೋಹಿತಾ ಸಿಂಗ್ ಸಹ ಈ ತರಬೇತಿಯ ಭಾಗವಾಗಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಜೀವ ಸದಸ್ಯೆ ಅಧ್ಯಕ್ಷೆ ಡಾ. ಪ್ರೀತಿ ದೊಡವಾಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇಂಡಿಯಾ ವಲ್ರ್ಡ್ ರೆಕಾರ್ಡ್ ನಿರ್ದೇಶಕ, ಗಿನ್ನಿಸ್ ವಲ್ರ್ಡ್ ರೆಕಾರ್ಡ್‍ನ ರೆಫ್ರಿ ಪವನ್ ಸೋಳಂಕಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅವರು ವಿದ್ಯಾರ್ಥಿಗಳ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.