ಮಡಿಕೇರಿ, ಫೆ. 12: ಕೊಡಗು ಜಿಲ್ಲೆಯಲ್ಲಿ ಜಲ ಪ್ರಳಯ ಉಂಟಾದ ಸಂದರ್ಭದಲ್ಲಿ ದಾನಿಗಳು, ಸಂಘ ಸಂಸ್ಥೆಗಳು ಕೊಡಗು ಸಂತ್ರಸ್ತರ ನಿಧಿಗೆ ರೂ. 132,65,64,347 ರಷ್ಟು ಹಣ ಸಂಗ್ರಹವಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾಹಿತಿ ನೀಡಿದ್ದಾರೆ.ವಿಧಾನ ಸಭಾ ಕಲಾಪದ ಚುಕ್ಕೆ ಗುರುತಿಲ್ಲದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಜಲಪ್ರಳಯ ಉಂಟಾದ ಸಂದರ್ಭ ದಾನಿಗಳು, ಸಂಘ ಸಂಸ್ಥೆಗಳು ನೀಡಿದ ಮೊತ್ತವೆಷ್ಟು, ಇದನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಜಲಪ್ರಳಯ ಉಂಟಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 6.2.2019ರವರೆಗೆ ರೂ. 132,65,64,347 ರಷ್ಟು ಹಣ ಸಂಗ್ರಹವಾಗಿದೆ. ಇದನ್ನು ಕೊಡಗಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಉತ್ತರ ನೀಡಿದ್ದಾರೆ.

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ಯಾವಾಗ ರಚನೆಯಾಯಿತು, ಎಷ್ಟು ಸಭೆ ನಡೆಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವರು 6.12.18 ರಂದು ಪ್ರಾಧಿಕಾರ ರಚನೆಯಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕಾಗಿದ್ದು, ತುರ್ತಾಗಿ ಸಭೆ ನಡೆಸಲು ಕ್ರಮ ವಹಿಸಲಾಗುವದೆಂದು ತಿಳಿಸಿದ್ದಾರೆ.

ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ 840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ ರೂ. 75 ಕೋಟಿ ಬಿಡುಗಡೆ ಮಾಡಲಾಗಿದೆ. ಆದಷ್ಟು ಶೀಘ್ರ ಮನೆ ನಿರ್ಮಿಸಿ ಹಂಚಿಕೆ ಮಾಡಲಾಗುವದೆಂದು ಸಚಿವರು ಉತ್ತರಿಸಿದ್ದಾರೆ.