ಸೋಮವಾರಪೇಟೆ, ಫೆ.6: ಇಲ್ಲಿನ ಕ್ಲಬ್ರಸ್ತೆ ಯಲ್ಲಿರುವ ಅಲೋಕ ರೆಸ್ಟೋರೆಂಟ್ ಸಮೀಪ ವಿರುವ ಮೋರಿಗೆ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಪಟ್ಟಣದ ಲೋಡರ್ಸ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೃಷ್ಣ (60) ಎಂಬವರೇ ಸಾವನ್ನಪ್ಪಿದವರಾಗಿದ್ದು, ನಿನ್ನೆ ತಡರಾತ್ರಿ ಘಟನೆ ನಡೆದಿರಬಹುದು ಎನ್ನಲಾಗಿದೆ. ಮೋರಿಯ ಮೇಲೆ ಕುಳಿತಿದ್ದ ಕೃಷ್ಣ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದು, ಕುತ್ತಿಗೆಯ ಭಾಗ ಮುರಿತಕ್ಕೊಳಗಾಗಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ದಾರಿಹೋಕರು ದುರ್ಘಟನೆಯನ್ನು ಕಂಡು ಸೋಮವಾರಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಮೃತ ಕೃಷ್ಣ ಅವರು ಪತ್ನಿ ಸರೋಜಮ್ಮ ಸೇರಿದಂತೆ ಈರ್ವರು ಮಕ್ಕಳನ್ನು ಅಗಲಿದ್ದಾರೆ.