ಮಡಿಕೇರಿ, ಫೆ. 5: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ 2017ರಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಧಾರ್ಮಿಕ ಪರಿಷತ್ತಿನ ಸಮಿತಿ ರಚಿಸಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ 11 ಸದಸ್ಯರ ಈ ಸಮಿತಿ ಸಭೆಯನ್ನು ಇದುವರೆಗೂ ಕರೆದಿಲ್ಲ ಎಂದು ತಿಳಿದು ಬಂದಿದೆ.
ಈ ಸಂಬಂಧ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿರುವ ಕೃಷ್ಣ ಉಪಾಧ್ಯಾಯ ಹಾಗೂ ಕೆ. ವೆಂಕಟೇಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಇನ್ನಾದರೂ ನೂತನ ಜಿಲ್ಲಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿ ಪರಿಷತ್ತಿನ ಸಭೆ ಕರೆಯುವಂತೆ ಗಮನ ಸೆಳೆದಿದ್ದಾರೆ.
ಅಲ್ಲದೆ ಮುಜರಾಯಿ ತಹಶೀಲ್ದಾರರು ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಯಾಗಿದ್ದು, ಸ ರಕಾರದಿಂದ ರಚನೆಗೊಂಡಿರುವ ಸಮಿತಿಯ ಸಭೆ ಕರೆದು ಧಾರ್ಮಿಕ ಇಲಾಖೆ ಅಧೀನ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಪರಿಷತ್ತಿನ ಸಲಹೆ ಪಡೆಯಬಹುದಾಗಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸರಕಾರಿ ಅಧೀನವಿರುವ ಎಲ್ಲಾ ದೇವಾಲಯಗಳ ನಿರ್ವಹಣೆಗೆ ಅನುವು ಮಾಡಿಕೊಡುವಂತೆಯೂ ಅವರುಗಳು ಒತ್ತಾಯಿಸಿದ್ದಾರೆ.