ಕುಶಾಲನಗರ, ಫೆ. 5: ಇಲ್ಲಿನ ಬಲಮುರಿ ಸಿದ್ಧಿವಿನಾಯಕ ದೇವಾಲಯದ 19ನೇ ವಾರ್ಷಿಕ ಪೂಜೋತ್ಸವ ತಾ, 16,17 ರಂದು ಎರಡು ದಿನಗಳ ಕಾಲ ನಡೆಯಲಿದೆ. ತಾ. 16 ರಂದು ಬೆಳಿಗ್ಗೆ 8 ಗಂಟೆಗೆ ಕಲಶ ಸ್ಥಾಪನೆ, ಶುದ್ಧಿ ಪುಣ್ಯಾಹ, ಗಣಪತಿ ಪೂಜೆ, ನವಗ್ರಹ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಸಂಜೆ ದೇವಾಲಯದ ಆವರಣದಲ್ಲಿ ಸಾರ್ವಜನಿಕರಿಗೆ ಸಾಂಸ್ಕøತಿಕ ಕಾರ್ಯಕ್ರಮದ ನಂತರ ಪ್ರದೋಷ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ. ತಾ. 17 ರಂದು ಬೆಳಿಗ್ಗೆ 5 ಗಂಟೆಗೆ ಸೂರ್ಯನಮಸ್ಕಾರ, ದೇವರಿಗೆ ತೈಲಾಭಿಷೇಕ, ಕಲಶ ಪೂಜೆ, ಕಂಕಣಧಾರಣೆ, ಮಹಾಗಣಪತಿ ಹೋಮ, ಅಷ್ಟೋತ್ತರ ಪೂಜೆ, ನಂತರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ಪ್ರದೋಷ ಕಾಲದಲ್ಲಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ರೇಣುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.