ಮಡಿಕೇರಿ, ಫೆ. 5: ಮಹಾತ್ಮ ಗಾಂಧಿ ಅವರ ಹತ್ಯೆಯನ್ನು ಮರುಸೃಷ್ಟಿ ಮಾಡಿ ಪ್ರತಿಕೃತಿ ದಹಿಸಿದ ಹಿಂದೂ ಮಹಾಸಭಾ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೆಪಿಸಿಸಿ ಪ್ರಮುಖ ಟಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭಾ ಸದಸ್ಯರಾದ ಚುಮ್ಮಿದೇವಯ್ಯ, ಪ್ರಕಾಶ್ ಆಚಾರ್ಯ, ಗಿಲ್ಬರ್ಟ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಸದಾಮುದ್ದಪ್ಪ, ಹನೀಫ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕುಶಾಲನಗರ: ಉತ್ತರ ಪ್ರದೇಶದಲ್ಲಿ ಗಾಂಧೀಜಿ ಹತ್ಯೆಯನ್ನು ವೈಭವೀಕರಿಸಿ ವಿಕೃತಿ ಮೆರೆದ ಹಿಂದೂ ಮಹಾಸಭಾದ ಮುಖ್ಯಸ್ಥೆಯ ಅತಿರೇಕವನ್ನು ಖಂಡಿಸಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಿಂದೂ ಮಹಾಸಭಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಯುಗಪುರುಷ ಮಹಾತ್ಮಾಗಾಂಧಿ ಅವರ ಸಾವನ್ನು ಸಂಭ್ರಮಿಸಿದ ಹಿಂದೂ ಮಹಾಸಭಾ ಕಾರ್ಯಕರ್ತರು ನಿಜವಾದ ದೇಶದ್ರೋಹಿಗಳು. ನಾಥೂರಾಂ ಗೋಡ್ಸೆ ಸಂತತಿಗಳು ದೇಶಕ್ಕೆ ಕಂಟಕಪ್ರಾಯ ಎಂದ ಶಶಿಧರ್ ಅಂತಹವರನ್ನು ಕೂಡಲೆ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್, ಕುಶಾಲನಗರ ಪಪಂ ಸದಸ್ಯರುಗಳಾದ ಶೇಖ್ ಖಲೀಮುಲ್ಲಾ, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಡಾ ಮಾಜಿ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ, ಪ್ರಮುಖರಾದ ಕೆ.ಕೆ. ಮಂಜುನಾಥ್‍ಕುಮಾರ್, ಫಜಲುಲ್ಲಾ, ಎಚ್.ಕೆ.ಪಾರ್ವತಿ, ಫಿಲೋಮಿನಾ ಮತ್ತಿತರರು ಇದ್ದರು.ಗೋಣಿಕೊಪ್ಪಲು : ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆ ಮರುಸೃಷ್ಟಿ ಸಂಭ್ರಮಾಚರಣೆ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗೋಣಿಕೊಪ್ಪಲುವಿನ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮುಂದಾಳತ್ವದಲ್ಲಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಪ್ರತಿಭಟನಾಕಾರರು ಹಿಂದೂ ಮಹಾಸಭಾ ಹಾಗೂ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ಹತ್ಯೆ ಬೆಂಬಲಿಸಿ ಅವರ ಪ್ರತಿಕೃತಿಗೆ ಗುಂಡು ಹಾರಿಸಿದವರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಮಹಾತ್ಮ ಗಾಂಧಿ ಹತ್ಯೆ ದಿನವಾದ ಜ.30ರಂದು ದೇಶದಾದ್ಯಂತ ಅವರ ಸ್ಮರಣೆ ನಡೆಯುತ್ತಿದ್ದರೆ ಅದೇ ಸಂದರ್ಭ ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಣೆ ನಡೆಸಿರುವದು ಕ್ರೂರ ಕೃತ್ಯ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ಅಜಿತ್ ಅಯ್ಯಪ್ಪ ಮಾತನಾಡಿ ‘ಗಾಂಧೀಜಿ’ ನೀಡಿರುವ ಕೊಡುಗೆ ಹಾಗೂ ಅಹಿಂಸಾ ಸಿದ್ಧಂತವನ್ನು ಜೀವಂತವಾಗಿಡಲು ಭಯಾನಕ ಭಯೋತ್ಪಾದನಾ ಕೃತ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಭಟನೆ ನಡೆಸಲಾಗಿದೆ. ಈ ಘಟನೆ ದೇಶದಲ್ಲಿ ಅಶಾಂತಿ ಪ್ರೇರೇಪಿಸಿದೆ. ದೇಶದ ಜಾತ್ಯತೀತ ಸಿದ್ಧಾಂತವನ್ನು ಹತ್ಯೆ ನಡೆಸಿದ ಘೋರ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಕಾರ್ಯದರ್ಶಿಗಳಾದ ಕಾಡ್ಯಮಾಡ ಚೇತನ್, ಎ.ಜೆ.ಬಾಬು ಹಿರಿಯ ಉಪಾಧ್ಯಕ್ಷರಾದ ತೆಕ್ಕಡ ಲಕ್ಷ್ಮಣ, ಯುವ ಕಾಂಗ್ರೆಸ್‍ನ ಅಧ್ಯಕ್ಷರಾದ ಜಮ್ಮಡ ಸೋಮಣ್ಣ, ಮುಖಂಡರುಗಳಾದ ನಜೀರ್, ಪಿ.ಕೆ.ಪ್ರವೀಣ್ ಹರಿದಾಸ್ ಮಣಿ, ನಾರಾಯಣ ಸ್ವಾಮಿ ನಾಯ್ಡು, ಬಿ.ಎನ್.ಪ್ರಕಾಶ್, ಗ್ರಾಮ ಪಂಚಾಯ್ತಿ ಸದಸ್ಯರಾದ ಮುರುಗ,ರಾಜಶೇಖರ್, ಕಲಿಮುಲ್ಲಾ, ಧನಲಕ್ಷ್ಮಿ, ಮಮಿತ, ಶಾಯಿನ, ಸುಲೈಕ, ಯುವ ಕಾಂಗ್ರೆಸ್‍ನ ಲಾಲು ಸ್ಟಾಲೀನ್,ಮುನೀರ್, ಮುಂತಾದವರು ಹಾಜರಿದ್ದರು. ಗೋಣಿಕೊಪ್ಪಲು ಪೊಲೀಸ್ ಠಾಣಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.