ಗೋಣಿಕೊಪ್ಪಲು, ಫೆ. 5: ದ.ಕೊಡಗಿನ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕೊಪ್ಪಲು ಗ್ರಾಮದ ರೈತರಾದ ಹೆಚ್.ಎಂ. ಪುಟ್ಟಪ್ಪನವರಿಗೆ ಸೇರಿದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಸುಮಾರು 5 ಸಾವಿರ ಹುಲ್ಲಿನ ಕಂತೆಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿವೆ.
ಮಧ್ಯಾಹ್ನದ ವೇಳೆಗೆ ಪುಟ್ಟಪ್ಪನವರ ಕಣದಲ್ಲಿ ಜೋಡಿಸಿಟ್ಟಿದ್ದ ಹುಲ್ಲಿನ ಮೆದೆಗೆ ಬೆಂಕಿ ತಗುಲಿದ್ದು, 50 ಸಾವಿರ ಮೌಲ್ಯದ ಹಸುಗಳ ಸಾಕಾಣಿಕೆಗೆ ದಾಸ್ತಾನು ಇಟ್ಟಿದ್ದ ಹುಲ್ಲು ಸುಟ್ಟು ಕರಕಲಾಗಿದೆ . ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಹಕಾರದಿಂದ ಸಮೀಪದಲ್ಲಿದ್ದ ಹೊಳೆಯಿಂದ ಪೈಪ್ ಲೈನ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ರೈತರಾದ ಹೆಚ್.ಎಂ. ಪುಟ್ಟಪ್ಪನವರು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬೆಂಕಿ ಅನಾಹುತದಿಂದ ಧನ, ಕರುಗಳಿಗೆ ಬೇಕಾದ ಹುಲ್ಲು ಇಲ್ಲದಂತಾಗಿದೆ. ಇದರಿಂದ ಇವರ ಬದುಕು ಸಂಕಷ್ಟಕ್ಕೀಡಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ರೈತನ ಸಂಕಷ್ಟಕ್ಕೆ ಪರಿಹಾರ ನೀಡಬೇಕೆಂದು ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಆಗ್ರಹಿಸಿದ್ದಾರೆ.