*ಗೋಣಿಕೊಪ್ಪಲು, ಫೆ. 3: ಜಿ.ಪಂ. ಅನುಧಾನದ 16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 50 ಸಾವಿರ ಲೀಟರ್ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಭೂಮಿಪೂಜೆ ನೆರೆವೇರಿಸಿದರು.
ಈ ಸಂದರ್ಭ ಮಾತನಾಡಿದ ಸಿ.ಕೆ. ಬೋಪಣ್ಣ, ಹಾತೂರು ಗ್ರಾ.ಪಂ. ವ್ಯಾಪ್ತಿಯ ಈರಣ್ಣ ಕಾಲೋನಿ ನಿವಾಸಿಗಳಿಗೆ ಬೇಸಿಗೆ ಸಂದರ್ಭ ಕುಡಿಯುವ ನೀರಿನ ಅಭಾವ ಎದುರಾಗುತ್ತಿತ್ತು. ಇದನ್ನು ಮನಗಂಡು ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೊಳವೆ ಬಾವಿ ಹಾಗೂ 50 ಸಾವಿರ ಲೀಟರ್ನ ಬೃಹತ್ ನೀರಿನ ತೊಟ್ಟಿಯನ್ನು ನಿರ್ಮಿಸಲು ಯೋಜನೆ ರೂಪಿಸಲಾಯಿತು. ಆದರೆ, ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಇದನ್ನು ನಿಭಾಯಿಸಲು ಮುಂದಾಗಿದ್ದು, ಸ್ಥಳೀಯ ಕಾವೇರಿ ಕಾಲೇಜಿನ ಆಡಳಿತ ಮಂಡಳಿ, ಹಾತೂರು ಗ್ರಾ.ಪಂ. ಮನವಿ ಮೇರೆಗೆ ಸ್ಥಳೀಯ ಕಾವೇರಿ ಕಾಲೇಜಿನ ಆಡಳಿತ ಮಂಡಳಿಯು ಉಧಾರ ಮನಸ್ಸಿನಿಂದ ಟ್ಯಾಂಕ್ ನಿರ್ಮಿಸಲು ಸ್ಥಳಾವಕಾಶ ನೀಡಿದೆ. ಟ್ಯಾಂಕ್ ನೀರಿನ ಬಳಕೆಯನ್ನು ಸ್ಥಳೀಯ ನಿವಾಸಿಗಳೊಂದಿಗೆ ಕಾಲೇಜಿನ ವ್ಯವಸ್ಥೆಗೂ ಒದಗಿಸಲಾಗಿದೆ ಎಂದರು.
ಹಾತೂರು ಗಾ.ಪಂ. ಅಧ್ಯಕ್ಷೆ ಜಯಂತಿ, ಸದಸ್ಯೆ ಮಾಲಿನಿ, ಮುಖಂಡ ವಿ.ಟಿ. ವಾಸು, ಕಾವೇರಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎ.ಸಿ. ಗಣಪತಿ, ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ನಿರ್ದೇಶಕರುಗಳಾದ ಕುಲ್ಲಚಂಡ ಬೋಪಣ್ಣ, ಸಿ.ಡಿ. ಮಾದಪ್ಪ, ಐ.ಕೆ. ಬಿದ್ದಪ್ಪ, ಎಂ.ಕೆ. ಮೊಣ್ಣಪ್ಪ. ಕೆ.ಎ ಚಿಣ್ಣಪ್ಪ, ಶಾಂತಿ ಮಾಚಯ್ಯ ಹಾಗೂ ಪಟ್ಟಣದ ಆಟೋ ಚಾಲಕರ ಅಧ್ಯಕ್ಷ ಜಿಮ್ಮ ಸುಬ್ಬಯ್ಯ ಸೇರಿದಂತೆ ನಿವಾಸಿಗಳು ಹಾಜರಿದ್ದರು.