ಕೂಡಿಗೆ, ಫೆ. 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಕೈಗೊಳ್ಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಸದಸ್ಯರಿಗೆ ತಲಾ 5 ಲಕ್ಷ ರೂ ಮೊತ್ತದಲ್ಲಿ ಕಾಮಗಾರಿ ಮಾಡಲು ಅವಕಾಶಗಳಿದ್ದು, ಈ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆಯ ಬಗ್ಗೆ ಚರ್ಚಿಸಲಾಯಿತು. ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆಯನ್ನು ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸುವ ಬಗ್ಗೆ ಎಲ್ಲಾ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ ಮುಂದಿನ ತಿಂಗಳು ಗ್ರಾಮ ಸಭೆ ನಡೆಯುವದರಿಂದ ಎಲ್ಲಾ ಸದಸ್ಯರು ತಮ್ಮ ವ್ಯಾಪ್ತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ, ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ಬಗ್ಗೆ ನಾವು ಕಾರ್ಯೋನ್ಮುಖರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯೆಷಾ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯು ಕೈಗಾರಿಕಾ ಪ್ರದೇಶವನ್ನು ಒಳಗೊಂಡಿದೆ. ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಕಂದಾಯ ಬಾಕಿ ಇರುವದರಿಂದ ಕಂದಾಯ ವಸೂಲಿ ಮಾಡುವದರ ಬಗ್ಗೆ ಸದಸ್ಯರೊಂದಿಗೆ ಸಲಹೆಗಳನ್ನು ನೀಡುವಂತೆ ಕೋರಿದರು. ಕಂದಾಯ ವಸೂಲಿಗೆ ಕಟ್ಟುನಿಟ್ಟಾಗಿ ಕಾರ್ಯೋನ್ಮುಖರಾಗಲು ಆಡಳಿತ ಮಂಡಳಿಯ ಸಹಕಾರ ಮುಖ್ಯ ಎಂದರು.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಹೆಸರುಗಳನ್ನು ನೊಂದಾವಣಿ ಮಾಡಿಕೊಳ್ಳುವ ಮೂಲಕ ತಮ್ಮ ತಮ್ಮ ಗ್ರಾಮಗಳ ಕಾಮಗಾರಿಗಳನ್ನು ನಿರ್ವಹಿಸಲು ಮುಂದೆ ಬರಲು ಸದಸ್ಯರು ಗ್ರಾಮಸ್ಥರಿಗೆ ತಿಳಿಸಬೇಕು ಎಂದರು. ಸಭೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸಣ್ಣಪ್ಪ ಸೇರಿದಂತೆ ಸದಸ್ಯರು ಇದ್ದರು.