ಕುಶಾಲನಗರ, ಫೆ. 2: ಕುಶಾಲನಗರ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಭದ್ರತಾ ಕೊರತೆ ಎದುರಿಸುತ್ತಿರುವ ಈ ಕಾಲೇಜಿನಲ್ಲಿ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಯುವ ಪೀಳಿಗೆಯ ಭವಿಷ್ಯ ಕತ್ತಲೆಗೆ ದೂಡುವಂತಾಗಿದೆ.

ಶಾಲಾ-ಕಾಲೇಜು ಆವರಣ ರಾತ್ರಿ ವೇಳೆ ಪುಂಡರ ಅಡ್ಡೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯ ವ್ಯವಸ್ಥೆಯಿಲ್ಲದ ಕಾರಣ ಸಮೀಪದ ಕಾಡು ಪೊದೆಗಳನ್ನು ಆಶ್ರಯಿಸಬೇಕಾದ ದುಸ್ಥಿತಿ ಎದುರಾಗಿದೆ. ಈ ಮೂಲಕ ಸುತ್ತಮುತ್ತಲ ನಾಗರಿಕರಿಗೆ ಅಸಹನೆ ಕೂಡ ಉಂಟಾಗುತ್ತಿದೆ.

‘ಗುಂಡಿ ಕಾಲೇಜು’ ಎಂಬ ಅಡ್ಡ ಹೆಸರಿನಿಂದಲೇ ಕರೆಯಲ್ಪಡುವ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಉತ್ತಮ ಶಿಕ್ಷಕ ವರ್ಗ ಮತ್ತು ಆಡಳಿತ ವ್ಯವಸ್ಥೆ ಇದ್ದರೂ ಮೂಲ ಉದ್ದೇಶ ಮಾತ್ರ ಈಡೇರುವಲ್ಲಿ ವಿಫಲಗೊಳ್ಳಲು ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಗಳು ಕೇಳಿಬಂದಿವೆ. ಕಾಲೇಜಿನ ಆವರಣದಲ್ಲಿ ಸುಸಜ್ಜಿತ ಮೈದಾನವಿದ್ದರೂ ಕೂಡ ಇದುವರೆಗೆ ತಡೆಗೋಡೆ ನಿರ್ಮಾಣಗೊಂಡಿಲ್ಲ. ಪರಿಣಾಮ ವಿದ್ಯಾರ್ಥಿಗಳು ಶಾಲಾ ಆವರಣ ತೊರೆದು ಸ್ವೇಚ್ಚಾಚಾರವಾಗಿ ಅಡ್ಡಾಡಬಹುದಾದ ವಾತಾವರಣ ಇಲ್ಲಿ ಸೃಷ್ಠಿಯಾಗಿದೆ.

8 ರಿಂದ 12ನೇ ತರಗತಿವರೆಗೆ ಸುಮಾರು 1200 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಕಾರಣ ಪ್ರ್ರೌಢಶಾಲಾ ವಿದ್ಯಾರ್ಥಿಗಳ ಶೌಚಾಲಯ ಬಳಸಬೇಕಾಗಿದೆ. ಕಾಲೇಜು ಹುಡುಗರಿಗೆ ಶೌಚಾಲಯ ವಿದ್ದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಕಾರಣ ಕಾಡು ಪೊದೆಗಳ ಆಶ್ರಯ ಪಡೆಯುವಂತಹ ಸ್ಥಿತಿ ಇಲ್ಲಿಯದ್ದು. ಬೆರಳೆಣಿಕೆ ಶೌಚಾಲಯಕ್ಕೆ ಎಲ್ಲಾ ವಿದ್ಯಾರ್ಥಿಗಳು ಕೂಡ ನಿಗದಿತ ಸಮಯದಲ್ಲಿ ಹೋಗಿ ಬರಲು ಸಾಧ್ಯವಾಗದ ಕಾರಣ ಬಹುತೇಕ ವಿದ್ಯಾರ್ಥಿಗಳ ಪಾಡು ಹೇಳತೀರದು.

ಇನ್ನು ಆಟದ ಮೈದಾನ ಒಳಗೊಂಡಂತೆ 4 ಎಕರೆ ವಿಸ್ತೀರ್ಣ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಲು ಯಾವದೇ ಯೋಜನೆ ಇನ್ನೂ ರೂಪುಗೊಂಡಿಲ್ಲ. ರಾತ್ರಿ ಪಾಳಿ ಕಾವಲುಗಾರ ವ್ಯವಸ್ಥೆ, ಸಮರ್ಪಕ ಬೆಳಕಿನ ಸೌಲಭ್ಯ ಕೂಡ ಇಲ್ಲದಿರುವ ಹಿನ್ನೆಲೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ದೂರುಗಳು ಕೇಳಿಬರುತ್ತಿವೆ. ಮದ್ಯಪಾನ, ಗಾಂಜಾ ಸೇವನೆ ಮತ್ತಿತರ ಚಟುವಟಿಕೆಗಳಿಗೆ ಈ ಪ್ರದೇಶ ಬಳಕೆಯಾಗುತ್ತಿದ್ದು ಕಿಡಿಗೇಡಿಗಳ ಹಾವಳಿಯಿಂದ ಕಟ್ಟಡÀ ಕಿಟಕಿ ಗಾಜುಗಳು, ಬಾಗಿಲು, ಮೇಲ್ಛಾವಣಿ ಆಗಿಂದಾಗೆ ಹಾನಿಗೊಳಗಾಗುತ್ತಿದೆ. ವಿದ್ಯಾರ್ಥಿಗಳ ಬಳಕೆಗೆ ಆವರಣದಲ್ಲಿ ನಿರ್ಮಿಸಿರುವ ನೀರಿನ ಸಣ್ಣ ಟ್ಯಾಂಕ್ ಶಿಥಿಲ ಗೊಂಡಿದ್ದು ಅಲ್ಲಲ್ಲಿ ಬಿರುಕು ಬಿಟ್ಟು ಅಪಾರ ಪ್ರಮಾಣದಲ್ಲಿ ನೀರು ಸೋರಿಕೆ ಕಂಡುಬಂದಿದೆ. ಈ ಟ್ಯಾಂಕ್‍ಗೆ ಅಳವಡಿಸಿರುವ ನಲ್ಲಿಗಳು ಕೂಡ ಕಿತ್ತು ಬಂದಿದ್ದು ನೀರು ಸೋರಿಕೆ ತಡೆಗೆ ಮರದ ತುಂಡುಗಳನ್ನು ತುರುಕಿರುವ ದೃಶ್ಯ ಅಪಹಾಸ್ಯಕ್ಕೆ ಈಡು ಮಾಡುತ್ತಿದೆ.

ಕಾಲೇಜು ವಿಭಾಗದಲ್ಲಿ ಅಗತ್ಯ ಸಂಖ್ಯೆಯ ಉಪನ್ಯಾಸಕರು, ಕಚೇರಿ ಗುಮಾಸ್ತರು, ಸ್ವೀಪರ್‍ಗಳ ಕೊರತೆಯಿ ರುವ ಈ ಕ್ಯಾಂಪಸ್‍ನ ಅಭಿವೃದ್ಧಿಗೆ ತೊಡಕುಂಟಾಗಿದೆ. ಕಾಲೇಜು ಅಭಿವೃದ್ಧಿ ಸಮಿತಿಯವರು ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರಬೇಕಾ ಗಿದೆ ಎನ್ನುವದು ವಿದ್ಯಾರ್ಥಿಗಳ ಪೋಷಕರ ಆಗ್ರಹವಾಗಿದೆ. ಶೌಚಾಲಯ ಕೊರತೆಯ ಸಮಸ್ಯೆ ಹಿನೆÀ್ನಲೆಯಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು ಸಮಸ್ಯೆ ಬಗ್ಗೆ ಮಾಹಿತಿ ಒದಗಿಸಲಾಗಿದೆ ಎಂದು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಿ.ಬಿ. ಸಾವಿತ್ರಿ ತಿಳಿಸಿದ್ದಾರೆ.

4 ಎಕರೆ ವಿಸ್ತೀರ್ಣಕ್ಕೆ ತಡೆಗೋಡೆ ನಿರ್ಮಿಸಲು 25 ಲಕ್ಷ ರೂ.ಗಳಿಗೆ ಅಧಿಕ ವೆಚ್ಚವಾಗುವ ಕಾರಣ ಈ ಯೋಜನೆ ಅಸಾಧ್ಯವಾಗಿದೆ. ಈಗಾಗಲೇ ಕಾಲೇಜು ವಿದ್ಯಾರ್ಥಿ ಗಳಿಂದ ಸಂಗ್ರಹಿಸುವ ಬೆಟರ್ಮೆಂಟ್ ಶುಲ್ಕದ ಬಹುಪಾಲು ಅತಿಥಿ ಉಪನ್ಯಾಸಕರು, ಗುಮಾಸ್ತರು, ಸ್ವೀಪರ್ ಗಳಿಗೆ ವಿನಿಯೋಗಿಸಲಾಗುತ್ತಿದೆ. ರಾತ್ರಿ ಪಾಳಿ ಕಾವಲುಗಾರರ ನೇಮಕಕ್ಕೆ ಕೂಡ ಯಾವದೇ ಅವಕಾಶ ಇಲ್ಲದ ಕಾರಣ ಸಮಸ್ಯೆ ಉಲ್ಭಣಿಸಿದೆ. ಈಗಾಗಲೆ ಸಮರ್ಪಕ ಸಂಖ್ಯೆಯಲ್ಲಿ ಶೌಚಾಲಯ ಗಳಿವೆ. ಆದರೂ ವಿದ್ಯಾರ್ಥಿಗಳ ಅಗತ್ಯತೆಯನ್ನು ಗಮನ ದಲ್ಲಿರಿಸಿ ಹೆಚ್ಚುವರಿ ಮೂತ್ರಾಲಯ ನಿರ್ಮಾಣಕ್ಕೆ ಶಾಸಕರ ಗಮನಕ್ಕೆ ತರಲಾಗುವದು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.

- ಚಂದ್ರಮೋಹನ್