ಕುಶಾಲನಗರ: ಕುಶಾಲನಗರದ ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಪಟ್ಟಣದ ಗಣಪತಿ ದೇವಾಲಯ ಆವರಣದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದ ಬಳಿಕ ನೆರೆದಿದ್ದ ಭಕ್ತಾದಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಶಿವಕುಮಾರ ಸ್ವಾಮೀಜಿಗಳು ಬೋಧಿಸಿದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳೀದರು.
ಪಟ್ಟಣದ ಪ್ರಮುಖರಾದ ಎಸ್.ಎನ್. ನರಸಿಂಹಮೂರ್ತಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳು ಬಸವಣ್ಣನವರು ಹೇಳಿದ ವಿಚಾರಗಳಿಗೆ ಕಟಿಬದ್ಧರಾಗಿ ನುಡಿದಂತೆ ನಡೆದವರಾಗಿದ್ದರು ಎಂದರು. ಕುಶಾಲನಗರದ ಜಾಮಿಯ ಮಸೀದಿ ಅಧ್ಯಕ್ಷ ಅಲೀಂ ಮಾತನಾಡಿ, ಇಡೀ ಸಂತ ಪರಂಪರೆ ಹಾಗೂ ಮನುಕುಲಕ್ಕೆ ಶ್ರೇಷ್ಠ ಸಂತ ವಿಚಾರಗಳನ್ನು ಬೋಸಿದ ಶಿವಕುಮಾರ ಸ್ವಾಮೀಜಿ ಭರತ ಭೂಮಿ ಕಂಡ ಮಹಾನ್ ಸಾಧಕ ಎಂದರು. ನಗರದ ಆಟೋ ಚಾಲಕರು, ಹೂ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು. ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಸಂಚಾಲಕ ಕೆ.ಎಸ್. ಮೂರ್ತಿ, ಕೆ.ಎಸ್. ಮಹೇಶ್, ಎಸ್.ಕೆ. ಸತೀಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಜಿ.ಎಲ್. ನಾಗರಾಜು, ಎಂ.ಬಿ. ಸುರೇಶ್, ಡಿ.ವಿ. ರಾಜೇಶ್, ಕೆ.ಎಸ್. ನಾಗೇಶ್, ಕೂಡಿಗೆ ಕುಮಾರ್, ಸೋಮಶೇಖರ್, ಕೆ.ಬಿ. ರಾಜು, ಪಿ.ಪಿ. ಸತ್ಯನಾರಾಯಣ ಮೊದಲಾದವರಿದ್ದರು.
ಶನಿವಾರಸಂತೆ: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಅವರ ಸ್ಮರಣೆಯಲ್ಲಿ ಬೆಸೂರು ಗ್ರಾಮ ಪಂಚಾಯಿತಿಯ ಗ್ರಾಮಸ್ಥರು, ಗ್ರಾಮದ ಭಕ್ತರಿಂದ ಸುಮಾರು 1 ಲೋಡ್ ಧವಸ ದಾನ್ಯಗಳನ್ನು ಸಂಗ್ರಹಿಸಿ, ತುಮಕೂರಿನ ಸಿದ್ಧಗಂಗಾ ಮಠಕ್ಕೆ ಕಳುಹಿಸಿಕೊಟ್ಟರು. ಬೆಸೂರು ಗ್ರಾಮದ ಶ್ರೀಗಳ ಪ್ರಮುಖ ಭಕ್ತರಾದ ಬಿ.ಕೆ. ರೇಣುಕಪ್ಪ, ಎನ್.ಎನ್. ಧರ್ಮಪ್ಪ, ಬಿ.ಬಿ. ಮಲ್ಲಪ್ಪ, ಎ.ಎಸ್. ಚಂದ್ರಪ್ಪ, ಬಿ.ಬಿ. ಧರ್ಮಪ್ಪ, ಮೂರ್ತಿ, ಯೋಗೇಶ್, ಆನಂದಮೂರ್ತಿ ಪಾಲ್ಗೊಂಡಿದ್ದರು.