ನಾಪೆÇೀಕ್ಲು, ಫೆ. 2: ಸಮೀಪದ ಬಲಮುರಿಯಿಂದ ಪಾರಾಣೆ ಹಾಗೂ ಎತ್ತುಕಡು ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಕಡೆಗಳಲ್ಲಿ ಅನಗತ್ಯ ಮೋರಿಗಳನ್ನು ನಿರ್ಮಿಸಿ ಕೆಲಸವನ್ನೂ ಪೂರ್ಣಗೊಳಿಸದೆ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಆದುದರಿಂದ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಪೆÇೀಕ್ಲು-ಪಾರಾಣೆ ಸಂಪರ್ಕ ರಸ್ತೆಯ ಎತ್ತುಕಡು ಸೇತುವೆಯ ನಿರ್ಮಾಣದ ಬಳಿಕ ಜನಸಂಚಾರಕ್ಕೆ ಅನುಕೂಲಕರವಾಗಿತ್ತು. ಬಲಮುರಿ ಹಾಗೂ ಪಾರಾಣೆ ಭಾಗಗಳಿಗೆ ತೆರಳುವ ಮಂದಿಗೆ ಈ ರಸ್ತೆಯು ಸಮೀಪದ ದಾರಿಯಾಗಿರುವದರಿಂದ ವಾಹನಗಳ ಓಡಾಟ ಹೆಚ್ಚಾಗಿತ್ತು. ಕಾಫಿ ಕೊಯ್ಲು ಮಾಡುತ್ತಿರುವ ಬೆಳೆಗಾರರು ತೋಟಗಳಿಂದ ವಾಹನಗಳಲ್ಲಿ ಕಾಫಿಯನ್ನು ಈ ರಸ್ತೆಯಲ್ಲಿ ಸಾಗಿಸುತ್ತಿದ್ದರು. ಇದರ ನಡುವೆ ಮಳೆಹಾನಿ ಪರಿಹಾರ ಯೋಜನೆಯಡಿಯಲ್ಲಿ ಈ ರಸ್ತೆಯಲ್ಲಿ ಮೋರಿ ನಿರ್ಮಾಣ ಅರಂಭಿಸಿ ಒಂದು ತಿಂಗಳಿನಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಒಂದು ಮೋರಿಯನ್ನು ಭಾಗಶಃ ನಿರ್ಮಿಸಲಾಗಿದ್ದು, ರಸ್ತೆಯಲ್ಲಿನ ಮಣ್ಣು ತೆರವುಗೊಳಿಸದೆ, ಕೆಲಸವನ್ನು ಸ್ಥಗಿತಗೊಳಿಸಿರುವದರಿಂದ ಬೆಳೆಗಾರರಿಗೆ, ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಳೆಯ ಬದಿ ಪರ್ಯಾಯ ರಸ್ತೆ ಇದ್ದರೂ ವಾಹನ ಚಲಿಸಲು ಕಷ್ಟಕರವಾಗಿದೆ. ಇತ್ತೀಚಿಗೆ ಹೊಳೆ ಬದಿ ವಾಹನವೊಂದು ಮಗುಚಿ ಬಿದ್ದು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಮೂರ್ನಾಡುವಿನಿಂದ ಮೂರು ಶಾಲಾ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದೀಗ ಅನಗತ್ಯ ಮೋರಿ ನಿರ್ಮಾಣದಿಂದ ಸಮಸ್ಯೆ ಎದುರಿಸುವಂತಾಗಿದೆ. ಆದುದರಿಂದ ಸಂಬಂಧಪಟ್ಟವರು ಕೂಡಲೇ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
- ಪಿ.ವಿ. ಪ್ರಭಾಕರ್