ಸೋಮವಾರಪೇಟೆ, ಫೆ. 2: ಕಳೆದ 1979 ರಲ್ಲಿ ಕಂದಾಯ ಇಲಾಖೆಯಲ್ಲಿ ಸೃಷ್ಟಿಸಲಾದ ಗ್ರಾಮ ಸಹಾಯಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಸಹಾಯಕರ ಸಂಘದಿಂದ ತಾಲೂಕು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
1979 ರಿಂದಲೂ ಗ್ರಾಮ ಸಹಾಯಕರಾಗಿ ದುಡಿಯುತ್ತಾ ಬಂದಿರುವ ನೌಕರರನ್ನು ಇದುವರೆಗೂ ಖಾಯಂಗೊಳಿಸದೇ ಇರುವದು ದುರಂತ. ಅಂದು ರೂ. 100 ಮಾಸಿಕ ವೇತನದಿಂದ ಪ್ರಾರಂಭವಾಗಿ ಇದೀಗ ಕೇವಲ ಮಾಸಿಕ ರೂ. 12,000 ನೀಡಲಾಗುತ್ತಿದೆ. ಈ ಹಣದಲ್ಲಿ ನೌಕರರು ಕುಟುಂಬ ನಿರ್ವಹಣೆ ಮಾಡುವದು ದುಸ್ತರವಾಗಿದೆ ಎಂದು ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.
ಸರ್ಕಾರದ ಇತರ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಿರುವ ಸರ್ಕಾರ, ಗ್ರಾಮ ಸಹಾಯಕರ ಬಗ್ಗೆ ಕಾಳಜಿ ವಹಿಸಬೇಕಿದೆ. ತಾಲೂಕು ಕಚೇರಿಯಲ್ಲಿ ಸ್ಟೈಪಂಡರಿ ಹುದ್ದೆ, ಗ್ರಾ.ಪಂ. ಬಿಲ್ ಕಲೆಕ್ಟರ್ ಹುದ್ದೆಯನ್ನು ಖಾಯಂ ಗೊಳಿಸಲಾಗಿದೆ. ಆದರೆ ಕಳೆದ 40 ವರ್ಷಗಳಿಂದ ದುಡಿಯುತ್ತಿರುವ ಗ್ರಾಮ ಸಹಾಯಕರನ್ನು ಮಾತ್ರ ಖಾಯಂಗೊಳಿಸಿಲ್ಲ. ಗ್ರಾಮ ಸಹಾಯಕರು ತಾಲೂಕು ಕಚೇರಿ, ಬೆಳೆ ಸಮೀಕ್ಷೆ, ಚುನಾವಣೆ, ಬಿಎಲ್ಓ ಆಗಿಯೂ ಕಾರ್ಯನಿರ್ವಹಿಸುತ್ತಿದ್ದು, ಸೇವಾ ಭದ್ರತೆ ಮಾತ್ರ ಇಲ್ಲವಾಗಿದೆ ಎಂದು ಸುರೇಶ್ ತಿಳಿಸಿದರು.
ಗ್ರಾಮ ಸಹಾಯಕ ಹುದ್ದೆಯನ್ನು ಖಾಯಂಗೊಳಿಸುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತರಾದಾಗ ಸರ್ಕಾರದಿಂದ ರೂ. 50 ಸಾವಿರ ಹಣ ನೀಡಲು ತೀರ್ಮಾನಿಸಲಾಗಿದೆ. ಆದರೆ ಗ್ರಾಮ ಸಹಾಯಕರು ಮಾತ್ರ ಇಂತಹ ಯಾವದೇ ಸೌಲಭ್ಯವನ್ನೂ ಹೊಂದಿಲ್ಲ. ಈ ಹಿನ್ನೆಲೆ ಎಲ್ಲಾ ಗ್ರಾಮ ಸಹಾಯಕ ರನ್ನೂ ಖಾಯಂಗೊಳಿಸಬೇಕೆಂದು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಲೀನಾ, ಖಜಾಂಚಿ ಶಶಿಕುಮಾರ್, ಪದಾಧಿಕಾರಿಗಳಾದ ಯಶೋಧ, ತುಂಗಪ್ಪ, ಸೋಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.