ಮಡಿಕೇರಿ, ಫೆ. 2: ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟು ನಂತರ ಜಾಮೀನಿನಡಿ ಬಿಡುಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಭಾಗಮಂಡಲ ಪೊಲೀಸರು ಬಂಧಿಸಿದ್ದಾರೆ.2001ರಲ್ಲಿ ಭಾಗಮಂಡಲ ಠಾಣಾ ವ್ಯಾಪ್ತಿಯಲ್ಲಿ ಎರಡು ಮರ ಕಳವು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ವರು ಆರೋಪಿಗಳಾದ ಕೇರಳ ರಾಜ್ಯದ ಕೊನ್ನೆಕಾಡುವಿನ ಪಿ.ಜೆ. ರಾಜಪ್ಪನ್, ಕುಂಞÂ ಕೃಷ್ಣ, ಪಿ.ಸಿ. ವಿಜು ಹಾಗೂ ವಿ.ಡಿ. ಜೋಸ್ ಇವರುಗಳು ಜಾಮೀನಿನಿಂದ ಹೊರಬಂದ ನಂತರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಇದೀಗ 18 ವರ್ಷಗಳ ಬಳಿಕ ಕೇರಳದ ಬೊಳ್ಳರಿಕುಂಡು ಎಂಬಲ್ಲಿ ಮೂವರನ್ನು ಬಂಧಿಸಲಾಗಿದೆ. ವಿ.ಡಿ. ಜೋಸ್ ಈಗಾಗಲೇ ಮೃತಪಟ್ಟಿದ್ದು, ನ್ಯಾಯಾಲಯಕ್ಕೆ ಮರಣ ದೃಢೀಕರಣ ಪತ್ರವನ್ನು ಸಲ್ಲಿಸಲಾಗಿದೆ.
ಎಸ್ಪಿ ಡಾ. ಸುಮನ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ದಯ್ಯ ನೇತೃತ್ವದಲ್ಲಿ ಭಾಗಮಂಡಲ ಸಹಾಯಕ ಠಾಣಾಧಿಕಾರಿ ಪಿ.ಎ. ಅಪ್ಪಾಜಿ, ಸಿಬ್ಬಂದಿ ಮೋಹನ್, ಸುನಿಲ್, ಅಯ್ಯಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.