ಕುಶಾಲನಗರ, ಫೆ. 2: ವಿದ್ಯಾರ್ಥಿಗಳು ಸರಕಾರದ ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿ ಕೊಂಡು ಜೀವನದಲ್ಲಿ ಯಶಸ್ಸು ಗಳಿಸ ಬೇಕಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೊಡಗು ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಡಿಕೇರಿ ಮತ್ತು ಸರಕಾರಿ ಪಾಲಿಟೆಕ್ನಿಕ್ ಕುಶಾಲನಗರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಹಮ್ಮಿ ಕೊಂಡಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂಪರ್ಕ ಅತಿ ಸುಲಭವಾಗಿ ದೊರೆ ಯುತ್ತಿದೆ. ಸರಕಾರ ಕೂಡ ವಿದ್ಯಾರ್ಥಿ ಗಳನ್ನು ಉತ್ತೇಜಿಸುವ ಕಾರ್ಯಕ್ರಮ ಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿ ಕೊಳ್ಳುವಲ್ಲಿ ಉತ್ತಮವಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಜಾಣ್ಮೆ ತೋರಬೇಕಿದೆ ಎಂದರು.
ಕೇವಲ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ನಂತರ ಕುತೂಹಲದಿಂದ ನಾಗರಿಕ ಸೇವಾ ಪರೀಕ್ಷೆ ಬಗ್ಗೆ ಆಸಕ್ತಿ ವಹಿಸಿ ಐಎಎಸ್ನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಸೇವೆಗೆ ತಾವು ಸೇರ್ಪಡೆಗೊಂಡ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ತಾಳ್ಮೆ ಮತ್ತು ಕಠಿಣ ಅಭ್ಯಾಸದ ಮೂಲಕ ಯಾವದೇ ರೀತಿಯ ಪರೀಕ್ಷೆ ಯನ್ನು ಅತಿ ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
(ಮೊದಲ ಪುಟದಿಂದ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಉದ್ಯೋಗ ಅರಸುವ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲ ರಾಗಿರಬೇಕಿದೆ. ಸಂದರ್ಶನವನ್ನು ಎದುರಿಸುವ ಸಂದರ್ಭ ಆತಂಕ ದೂರಮಾಡಿ ಹಸನ್ಮುಖಿಗಳಾಗಿರುವ ಮೂಲಕ ಆಯ್ಕೆಗಾರರ ಗಮನ ಸೆಳೆಯಬೇಕಿದೆ. ಗ್ರಾಮೀಣ ವಿದ್ಯಾರ್ಥಿಗಳು ಮಾತೃಭಾಷೆಯನ್ನು ಪ್ರೀತಿಸುವದರೊಂದಿಗೆ ಔದ್ಯೋಗಿಕ ವಾಗಿ ಅವಶ್ಯವಿರುವ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಗಮನ ಹರಿಸಬೇಕಿದೆ. ಪ್ರತಿ ಹಂತದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಸೋಮವಾರಪೇಟೆ ತಾಪಂ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಕೇವಲ ಸರಕಾರಿ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಕಾಲಘಟ್ಟ ಬದಲಾಗುವದರೊಂದಿಗೆ ಖಾಸಗಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು ದೊರೆಯುತ್ತಿವೆ. ತಮಗೆ ದೊರೆತಂತಹ ಉದ್ಯೋಗದಿಂದ ಹೆಚ್ಚಿನ ಅನುಭವ ಗಳಿಸಿ ಆ ಮೂಲಕ ಉನ್ನತ ಮಟ್ಟದ ಉದ್ಯೋಗದತ್ತ ದಾಪುಗಾಲಿರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಕೆ.ಎಸ್.ಭಾರತಿ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ತಹಶೀಲ್ದಾರ್ ಗೋವಿಂದರಾಜು, ತಾಪಂ ಕಾರ್ಯ ನಿರ್ವಹಣಾಧಿಕಾರಿ ಬಿನಾಯ್, ಐಟಿಡಿಪಿ ಅಧಿಕಾರಿ ಶಿವಕುಮಾರ್ ಇದ್ದರು. ಕಲಾವಿದರಾದ ಷಡಾಕ್ಷರಿ, ಗೋಪಿ ತಂಡ ನಾಡಗೀತೆ ಹಾಡಿದರು, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನ್ನಾಥ್ ಸ್ವಾಗತಿಸಿದರು, ಡಯಟ್ ಉಪನ್ಯಾಸಕ ಕೆ.ವಿ.ಸುರೇಶ್ ನಿರೂಪಿಸಿದರು,
ಕಾಲೇಜು ಪ್ರಾಂಶುಪಾಲ ಕೆಂಪೇಗೌಡ ವಂದಿಸಿದರು.
ಮೇಳದಲ್ಲಿ ಜಿಲ್ಲೆಯ ಹೋಟೆಲ್, ರೆಸಾರ್ಟ್ಗಳು, ಸ್ವಿಗ್ಗಿ, ಉಬರ್ ಸೇರಿದಂತೆ ರಾಜ್ಯದ ವಿವಿಧೆಡೆಯ 32 ಕ್ಕೂ ಅಧಿಕ ಸಂಸ್ಥೆಗಳು ಪಾಲ್ಗೊಂಡಿದ್ದವು. ಸಾವಿರಾರು ಉದ್ಯೋಗಾಸಕ್ತರು, ವಿದ್ಯಾರ್ಥಿಗಳು ಮೇಳದ ಪ್ರಯೋಜನ ಪಡೆದುಕೊಂಡರು. ಇದರೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೌಶಲ್ಯ ತರಬೇತಿ ಕಾರ್ಯಗಾರ ಕೂಡ ನಡೆಯಿತು.