ಓರ್ವನ ಬಂಧನ: ಈರ್ವರು ಪರಾರಿ
ಗೋಣಿಕೊಪ್ಪ ವರದಿ, ಫೆ. 2: ಕೇರಳ ರಾಜ್ಯಕ್ಕೆ ಅಕ್ರಮವಾಗಿ ಬೀಟೆ ನಾಟ ಸಾಗಿಸುತ್ತಿದ್ದ ಸಂದರ್ಭ ಧಾಳಿ ನಡೆಸಿರುವ ಪೊನ್ನಂಪೇಟೆ ವಲಯ ಅರಣ್ಯ ಕಾರ್ಯಾಚರಣೆ ತಂಡ ಲಾರಿ ಸೇರಿದಂತೆ ಸುಮಾರು 12.5 ಲಕ್ಷದ ಮಾಲು ವಶ ಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಅರೆಕಾಡು ನಿವಾಸಿ ಶಭಾದ್ (22) ಬಂಧಿತ ಆರೋಪಿಯಾಗಿದ್ದು, ಸಿದ್ದಾಪುರ ಗ್ರಾಮದ ದೀಪಕ್ ವಾಲ್ಟರ್ (36) ಹಾಗೂ ಹನ್ಸದ್ (23) ತಲೆಮರೆಸಿಕೊಂಡಿದ್ದಾರೆ.
ಗೋಣಿಕೊಪ್ಪ ಭಾಗದಿಂದ ಕೇರಳಕ್ಕೆ ಸಾಗಿಸುತ್ತಿದ್ದ ಸಂದರ್ಭ ಕುಟ್ಟ ತಪಾಸಣಾ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ರೂ. 10 ಲಕ್ಷ ಮೌಲ್ಯದ ಐಶರ್ ಲಾರಿ ಹಾಗೂ 2.5 ಲಕ್ಷ ಮೌಲ್ಯದ 17 ನಾಟಾಗಳಿದ್ದ 2.358 ಘನ ಮೀಟರ್ ಮರವನ್ನು ವಶಕ್ಕೆ ಪಡೆಯಲಾಗಿದೆ.
ಡಿಸಿಎಫ್ ಮರಿಯಾ ಕ್ರೈಸ್ತರಾಜ್ ಹಾಗೂ ಎಸಿಎಫ್ ಶ್ರೀಪತಿ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ವಲಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಉಪ ವಲಯ ಅರಣ್ಯಾಧಿಕಾರಿ ಮೂರ್ತಿ, ಅರಣ್ಯ ರಕ್ಷಕ ಸಂಜಯ್ ಚೌಹಾಣ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.
-ಸುದ್ದಿಪುತ್ರ