ಸೋಮವಾರಪೇಟೆ, ಫೆ. 2: ರಸ್ತೆಯಲ್ಲಿ ತೆರಳುತ್ತಿದ್ದ ಪಾದಚಾರಿಗೆ ಸಿಮೆಂಟ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕನೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಮಾದಾಪುರ ಪಟ್ಟಣದಲ್ಲಿ ನಡೆದಿದೆ.

ಗರ್ವಾಲೆ ಗ್ರಾಮದ ಚಂಗಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ ರಾಮು ಎಂಬವರು ಮಾದಾಪುರ ಪಟ್ಟಣದಲ್ಲಿ ತೆರಳುತ್ತಿದ್ದ ಸಂದರ್ಭ, ಪ್ರಾಕೃತಿಕ ವಿಕೋಪ ಸಂತ್ರಸ್ಥರಿಗೆ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಸಿಮೆಂಟ್ ಕಾಂಕ್ರೀಟ್ ತೆಗೆದುಕೊಂಡು ಹೋಗುತ್ತಿದ್ದ ಲಾರಿ ಡಿಕ್ಕಿಯಾಗಿದೆ.

ಲಾರಿಯ ಹಿಂಬದಿ ಚಕ್ರಕ್ಕೆ ರಾಮು ಅವರು ಸಿಲುಕಿದ್ದು, ತೊಡೆ, ಸೊಂಟದ ಕೆಳ ಭಾಗಕ್ಕೆ ಗಂಭೀರ ಗಾಯವಾಗಿ ಜೀವನ್ಮರಣದ ಸ್ಥಿತಿಗೆ ತಲಪಿದ್ದರು. ತಕ್ಷಣ ಸ್ಥಳೀಯರು ಗಾಯಾಳುವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಸಾವನ್ನಪ್ಪಿದ್ದಾರೆ.