ಕುಶಾಲನಗರ, ಫೆ. 2: ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಟಿ.ಆರ್.ಶರವಣಕುಮಾರ್, ಉಪಾಧ್ಯಕ್ಷರಾಗಿ ಎಂ.ಎಂ.ಶಾಹಿರ್ ಅವಿರೋಧವಾಗಿ ಆಯ್ಕೆಗೊಂಡರು.

ಸಂಘದ ಕಛೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿ ರಘು ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈ ಅವಿರೋಧ ಆಯ್ಕೆ ನಡೆಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಆರ್.ಶರವಣಕುಮಾರ್, ಪಟ್ಟಣದ ವ್ಯಾಪಾರಿಗಳ ಹಿತಕ್ಕಾಗಿ 2004 ರಲ್ಲಿ ಆರಂಭವಾದ ಸಂಘ ಕಳೆದ 14 ವರ್ಷಗಳಿಂದ ವ್ಯಾಪಾರಸ್ಥರ ಬೆನ್ನೆಲುಬಾಗಿ ನಿಂತಿದೆ. ಈವರೆಗೆ 32 ಕೋಟಿ ರೂ.ಗಳ ಸಾಲ ವಿತರಿಸಲಾಗಿದ್ದು ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಘದ ಸಾಧನೆಗಾಗಿ ಈವರೆಗೆ 2 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಮ್ಮ ಕಾರ್ಯವ್ಯಾಪ್ತಿಯನ್ನು ನೆರೆಯ ಸೋಮವಾರಪೇಟೆ ಮತ್ತು ಪಿರಿಯಾಪಟ್ಟಣ ತಾಲೂಕಿನ ಪ್ರಮುಖ ಪಟ್ಟಣಗಳಿಗೆ ವಿಸ್ತರಿಸುವ ಮೂಲಕ ಅಲ್ಲಿನ ವ್ಯಾಪಾರಿಗಳ ಅಭಿವೃದ್ದಿಗೆ ಪಣತೊಡಲಾಗಿದೆ ಎಂದರು.

ಇತ್ತೀಚೆಗೆ ಸಂಘದ 15 ಮಂದಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಶೇ.93 ರಷ್ಟು ಮತದಾನ ನಡೆದಿರುವದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಮುಂದಿನ 5 ವರ್ಷಗಳ ಕಾಲ ಸದಸ್ಯರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಲಾಗುವದು ಎಂದರು.

ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಕವಿತಾ ಮೋಹನ್, ರೇಖಾ ರಾಜಶೇಖರ್, ಎಂ.ವಿ.ನಾರಾಯಣ, ಆರ್.ಕೆ.ನಾಗೇಂದ್ರಬಾಬು, ಜೋಸೆಫ್ ವಿಕ್ಟರ್ ಸೋನ್ಸ್, ಎನ್.ಇ.ಶಿವಪ್ರಕಾಶ್, ಕೆ.ಎಸ್.ಮಹೇಶ್, ವಿ.ಸಿ.ಅಮೃತ್, ಕೆ.ಪಿ.ಶರತ್, ಕೆ.ಸುರೇಶ್ ಕುಮಾರ್, ಎಲ್.ನವೀನ್, ಬಿ.ರಾಮಕೃಷ್ಣಯ್ಯ, ಜಗದೀಶ್, ಸಂಘದ ವ್ಯವಸ್ಥಾಪಕ, ಸಿಬ್ಬಂದಿ ವರ್ಗದವರು ಇದ್ದರು.