ಮಡಿಕೇರಿ, ಫೆ. 1: ಕೊಡಗಿನಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಮುಂದಿನ ರಾಜ್ಯ ಬಜೆಟಿನಲ್ಲಿ ಉತ್ತಮ ಯೋಜನೆಗಳನ್ನು ನೀಡಲಾಗುವದು ಎಂದು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ತಿಳಿಸಿದರು.ತಾ. 8ರಂದು ರಾಜ್ಯದಲ್ಲಿ ಘೋಷಣೆಯಾಗುವ ಬಜೆಟಿನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜತೆಗೆ ಚರ್ಚಿಸ ಲಾಗುವದು ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಹೇಳಿದರು.ಕಳೆದ ಆಗಸ್ಟ್‍ನಲ್ಲಿ ಆದ ಭೂಕುಸಿತದಿಂದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ವಿಳಂಬವಾಯಿತು, ಪ್ರವಾಸಿ ಉತ್ಸವದಿಂದ ಮತ್ತೆ ಕೊಡಗಿನಾದ್ಯಂತ ಹೆಚ್ಚು ಪ್ರವಾಸಿಗರು ಬರಲು ಕಾರಣವಾಗಿದೆ ಎಂದು ಮಹೇಶ್ ತಿಳಿಸಿದರು.ನಗರದಲ್ಲಿರುವ ಕೋಟೆ, ರಾಜಾಸೀಟ್, ಕೊಡವ ಹೆರಿಟೇಜ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಆದ ಮಹಾ ದುರಂತದಿಂದ ಇನ್ನು ನಿರಾಶ್ರಿತರು ಹೊರ ಬಂದಿಲ್ಲ. ದುರಂತ ಆದ ತಕ್ಷಣದಿಂದಲೇ ತಾತ್ಕಾಲಿಕ ಪರಿಹಾರ ಕ್ರಮಗಳು ಸರ್ಕಾರದಿಂದ ವೇಗವಾಗಿ ನಡೆದಿದೆ. ಆದರೆ ಶಾಶ್ವತ ಪರಿಹಾರಗಳಿಗೆ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸಬೇಕಿರುವ ದರಿಂದ ಕೆಲಸಗಳು ನಿಧಾನಗತಿಯಲ್ಲಿ ಆಗುತ್ತಿವೆ ಬಿಟ್ಟರೆ, ಎಲ್ಲರಿಗೂ ಪರಿಹಾರ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದರು.

ಟೀಕೆ ಟಿಪ್ಪಣಿ ಸಹಜ: ಯಾವದೇ ಯೋಜನೆಗಳನ್ನು ಮಾಡುವದಕ್ಕೆ ಮೊದಲು ಟೀಕೆ ಟಿಪ್ಪಣಿ ಸಹಜ, ಮೊದಲ ಹಂತದಲ್ಲಿ ನಿವೇಶನ ಹುಡುಕುವ ಕೆಲಸ ಜಿಲ್ಲಾಡಳಿತ ವೇಗವಾಗಿ ಮಾಡಿದೆ, ಇನ್ನು ಮನೆಗಳ ನಿರ್ಮಾಣ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬ ಆಗುತ್ತಿವೆ ಎಂದು ತಿಳಿಸಿದರು.

ಪರಿಹಾರ ವಿಷಯದಲ್ಲಿ ಇಡೀ ದೇಶದಲ್ಲಿ ಇಷ್ಟೆಲ್ಲ ಸೌಲಭ್ಯಗಳನ್ನು ಒಂದೇ ಜಿಲ್ಲೆಗೆ ನೀಡಿರುವದು ಕುಮಾರಸ್ವಾಮಿ ಸರ್ಕಾರ ಮಾತ್ರ ಎಂದು ಮಹೇಶ್ ನುಡಿದರು.

ನಿರಾಶ್ರಿತರ ಬೇಡಿಕೆಯಂತೆ ರೂ. 9.85 ಲಕ್ಷಕ್ಕೆ ಹಣ ಏರಿಸಿ ಉತ್ತಮ ಮನೆಗಳನ್ನು ನೀಡಲಾಗುತ್ತಿದೆ, ಜತೆಗೆ 846 ನಿರಾಶ್ರಿತ ಕುಟುಂಬಗಳಿಗೂ ಪರಿಹಾರ ಚೆಕ್ ವಿತರಿಸಲಾಗಿದೆ. ನಿರಾಶ್ರಿತರಿಗೆ ನೂತನ ಮನೆ ಆಗುವವರೆಗೂ ಬಾಡಿಗೆ ಮನೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.

ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಬಜೆಟ್‍ನಲ್ಲಿ ಯೋಜನೆ

(ಮೊದಲ ಪುಟದಿಂದ) ಕೊಡಗಿನಲ್ಲಿ ರೆಸಾರ್ಟ್‍ಗಳ ಸಂಖ್ಯೆ ಏರಿಕೆಯಾಗುತ್ತಿದೆ, ಇದಕ್ಕೆ ಕಡಿವಾಣ ಹಾಗಬೇಕು, ನಗರದಲ್ಲಿ ಕೇವಲ 2 ಸಾರ್ವಜನಿಕ ಶೌಚಾಲಯಗಳಿವೆ ಇವುಗಳ ಸಂಖ್ಯೆ ಹೆಚ್ಚಿಸಬೇಕು, ನಗರದಲ್ಲಿ ವೀಕ್ಷಣ ಗೋಪುರಗಳನ್ನು ಸ್ಥಾಪಿಸಬೇಕಿದೆ. ರಾಜಸೀಟ್‍ನಿಂದ ನೆಹರು ಮಂಟಪಕ್ಕೆ ಕೇಬಲ್ ಕಾರು ವ್ಯವಸ್ಥೆಗಳನ್ನು ಮಾಡಿದ್ದಲ್ಲಿ ಪ್ರವಾಸಿಗರಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದು ಸಲಹೆ ಮಾಡಿದರು.

ಸಂವಾದದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಮನು ಶಣೈ, ಜೆಡಿಎಸ್ ಮುಖಂಡ ಕೆ.ಎಂ. ಗಣೇಶ್ ಹಾಜರಿದ್ದರು.