ಗೋಣಿಕೊಪ್ಪಲು, ಜ.30: ಕೊಡಗು ಜಿಲ್ಲೆಯನ್ನು ಬಾಲ್ಯದಿಂದಲೇ ನೋಡುತ್ತಾ ಬೆಳೆದವನು ನಾನು. ನಾಗರಹೊಳೆಗೆ ನಿರಂತರ ಭೇಟಿ ನೀಡುತ್ತಿದ್ದೆ. ಕಳೆದ 25 ವರ್ಷಗಳಿಂದ ನಾಗರಹೊಳೆ ಒಳಗೊಂಡಂತೆ ಕೊಡಗು ಜಿಲ್ಲೆಗೆ ನಿರಂತರ ಭೇಟಿ ನೀಡುತ್ತಾ ಬಂದಿದ್ದೇನೆ. ಅದೊಂದು ಪ್ರಕೃತಿ ವಿಕೋಪ. ಪ್ರಕೃತಿಯ ಮೇಲಿನ ಮಾನವನ ದೌರ್ಜನ್ಯ ಕಡಿಮೆಯಾಗಬೇಕು. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳಬೇಕು ಎಂದು ಮೈಸೂರು ಅರಮನೆಯ ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಡಿಕೇರಿ ಕ್ರಿಸ್ಟಲ್ ಕೋರ್ಟ್‍ನಲ್ಲಿ ಜರುಗಿದ ನಗೆ ಸಮ್ಮೇಳನಕ್ಕೆ ಆಗಮಿಸಿದ್ದ ಸಂದರ್ಭ ‘ಶಕ್ತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಕೊಡಗು ಕರ್ನಾಟಕದ ಸುಂದರವಾದ ಸ್ಥಳ. ಇಲ್ಲಿಯ ವಿಶೇಷ ಕಾಡುಗಳು, ಇಲ್ಲಿನ ಸಂಪ್ರದಾಯ ನಮಗೆ ಎಲ್ಲೂ ಕಾಣಸಿಗದು. ಹಿಂದಿನ ಕಾಲದ ರಾಜರಿಗೆ ಕೊಡಗು ವಿಹಾರ ತಾಣವಾಗಿತ್ತು. ವಿಶ್ರಾಂತಿಗಾಗಿ ಕೊಡಗಿಗೆ ಬಂದು ಹೋಗುತ್ತಿದ್ದರು. ಮೈಸೂರು, ಮಂಡ್ಯ, ಬೆಂಗಳೂರು ಜನತೆಗೆ ನೀರುಣಿಸುವ ಕಾವೇರಿ ಜೀವನದಿಂiÀi ತಾಣ ಕೊಡಗು ಪರಿಸರ ಹಾಳಾಗಬಾರದು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದ ಸ್ಥಳ ಕೊಡಗು. ಇಲ್ಲಿನ ಸಂಪ್ರದಾಯ, ಉಡುಗೆ-ತೊಡುಗೆ, ವೈವಿದ್ಯಮಯ ಪ್ರಕೃತಿ ಸಂಪತ್ತು ರಾಜ್ಯ ಹಾಗೂ ದೇಶದ ಯಾವದೇ ಭಾಗದಲ್ಲಿ ಕಾಣಸಿಗುವದಿಲ್ಲ. ಪ್ರವಾಸೋದ್ಯಮದೊಂದಿಗೆ ಮನರಂಜನೆಯ ತಾಣ ಇಲ್ಲಿದೆ. ಇದೂ ಉಳಿಯಬೇಕು. ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ನಾವೆಲ್ಲಾ ಒತ್ತು ನೀಡಬೇಕು ಎಂದರು.

ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಪ್ರಾಂತ್ಯ ಕೊಡಗು ಬೇರೆ ಬೇರೆಯದೇ ಆಗಿತ್ತು. ಊಟಿ ಹಾಗೂ ಸುಲ್ತಾನ್ ಬತೇರಿ ಮೈಸೂರು ಸಂಸ್ಥಾನಕ್ಕೆ ಒಳಪಟ್ಟಿತ್ತು. ಕಾಸರಗೋಡು ದಕ್ಷಿಣ ಕನ್ನಡಕ್ಕೆ, ಆಂಧ್ರದ ಕರ್ನೂಲು ಕರ್ನಾಟಕಕ್ಕೆ ಒಳಪಟ್ಟಿತ್ತು. 1955 ರಲ್ಲಿ ಪ್ರತ್ಯೇಕ ಕನ್ನಡ ನಾಡಿನ ಅಸ್ತಿತ್ವಕ್ಕೆ ನನ್ನ ತಾತ ಜಯರಾಮರಾಜೇಂದ್ರ ಒಡೆಯರ್ ಅವರೂ ಕೈಜೋಡಿಸಿದ್ದರು. ಕನ್ನಡದ ಏಕೀಕರಣದ ಕನಸನ್ನು ಅವರು ಹೊಂದಿದ್ದರು. ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿ.ವಿ.ನಂಜುಂಡಯ್ಯ ಅವರು 1915 ರಲ್ಲಿ ಅಧ್ಯಕ್ಷರಾಗಿದ್ದಾಗಲೇ ಕನ್ನಡ ಏಕೀಕರಣದ ಕೂಗಿತ್ತು. ಆದರೆ, ಬ್ರಿಟೀಷ್ ಆಳ್ವಿಕೆಯಲ್ಲಿ ಸಂವಿಧಾನ ಬದಲಿಸಲು ಸಾಧ್ಯವಾಗಲಿಲ್ಲ. ರಾಜರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನ ಇದ್ದಾಗ್ಯೂ 1955 ರಲ್ಲಿ ಫೈಸಲ್ ಆಲಿ ಕಮೀಷನ್ ತೀರ್ಮಾನದಂತೆ ರಾಜ್ಯ ಪುನರ್‍ವಿಂಗಡಣೆಯಾದ ಸಂದರ್ಭ ಮೈಸೂರು ಸಂಸ್ಥಾನದಲ್ಲಿಯೇ ಇದ್ದ ಊಟಿ ತಮಿಳುನಾಡಿಗೆ, ಸುಲ್ತಾನ್ ಬತೇರಿ ಕೇರಳ ರಾಜ್ಯಕ್ಕೆ ಸೇರ್ಪಡೆಯಾಗುತ್ತದೆ. ರಾಜರ ಆಳ್ವಿಕೆ ಇದ್ದ ಪ್ರದೇಶದಲ್ಲಿ ಪದವಿ ತ್ಯಾಗ ಮಾಡಲೂ ಶಿಫಾರಸ್ಸು ಮಾಡಲಾಗುತ್ತದೆ. ಆದರೆ, ರಾಜ ಮನೆತನದ ಅಧಿಕಾರವನ್ನು ಯಾರೂ ಕಿತ್ತುಕೊಳ್ಳುವಂತಿಲ್ಲ. 1973 ರಲ್ಲಿ ಕೆಲವೊಂದು ಬದಲಾವಣೆಯಾದರೂ ರಾಜ ಮನೆತನ ಒಡೆತನ ಅಭಾದಿತ ಎಂದು ವಿವರಿಸಿದ ಯದುವೀರ್ ಅವರು, ಕನ್ನಡ ನಾಡಿನ ಕನಸಿಗೆ ನೀರೆರೆದ ರಾಜಮನೆತನಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು ಇಲ್ಲಿನ ಅರಮನೆ, ರಾಜಮನೆತನ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇದರ ಬಗ್ಗೆ ಅರಿತುಕೊಳ್ಳಲು ಅಮಿತ್ ಶಾ ಅಥವಾ ಯಾವದೇ ರಾಜಕೀಯ ಪಕ್ಷದ ಪ್ರಮುಖರು ನಮ್ಮಲ್ಲಿಗೆ ಬಂದು ವಿಚಾರ ವಿನಿಮಯ ಮಾಡಿ ಹೋಗುವದರಿಂದ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವದು ಸರಿಯಲ್ಲ ಎಂದು ವಿವರಿಸಿದರು.

ಕೊಡಗಿನ ಸಂರಕ್ಷಣೆಗೆ ಪರಿಸರ ಪೂರಕವಾದ ಕಾನೂನು ಅಗತ್ಯ. ಕೊಡಗಿನ ಜನತೆಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲು ಪ್ರವಾಸೋದ್ಯಮ ಚಟುವಟಿಕೆ ಉತ್ತಮಗೊಳ್ಳಬೇಕು ಎಂದು ಹೇಳಿದ ಅವರು, ಇಂದು ‘ಮೈಸೂರು ಸಿಲ್ಕ್’ ಸೀರೆಗಳು ಹಾಗೂ ಮೈಸೂರು ‘ಸ್ಯಾಂಡಲ್ ಸೋಪು’ ಅವನತಿಯ ಹಾದಿಯಲ್ಲಿದೆ. ಇದರ ಪುನಶ್ಚೇತನವೂ ಆಗಬೇಕು. ಮೈಸೂರು ಅರಮನೆಯ ಪರಿಸರವೇ ದೊಡ್ಡ ಶಕ್ತಿ. ಇದರ ಸೌಂದರ್ಯ ಈಗೇ ಉಳಿಯಬೇಕು. ಪ್ರವಾಸಿಗರಿಗೆ ಇದೊಂದು ಪರಿಸರ ಶಿಕ್ಷಣ ಶಾಲೆ ಇದ್ದಂತೆ ಎಂದು ಯದುವೀರ್ ಒಡೆಯರ್ ‘ಶಕ್ತಿ’ಯೊಂದಿಗೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದರು.

-ಟಿ.ಎಲ್.ಶ್ರೀನಿವಾಸ್