*ಗೋಣಿಕೊಪ್ಪಲು, ಜ. 30 : ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ, ಹಳೆಯ ವಿದ್ಯಾರ್ಥಿಗಳ ಸಭಾಂಗಣ ನಿರ್ಮಾಣ ಕಾಮಗಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ತಿತಿಮತಿ ಶಾಲೆಯ ಮುಂಭಾಗದಲ್ಲಿ ತೆರೆದ ಸಭಾಂಗಣವು, ಶಾಸಕರ ಅನುದಾನದ ಐದು ಲಕ್ಷ ಹಾಗೂ ಇಪ್ಪತ್ತು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ನಿವೃತ್ತ ಶಿಕ್ಷಕಿ ಬಾಚಮಾಡ ಕಮಲ ಹಾಗೂ ಸೋಮಯ್ಯ ದಂಪತಿಗಳ ಪುತ್ರ ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಚೇತನ್ ಅವರು ಉದಾರವಾಗಿ ನೀಡಿದ ಐದು ಲಕ್ಷ ಸೇರಿದಂತೆ ಒಟ್ಟು ಹತ್ತು ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.

ಈ ಸಂದರ್ಭ ಮಾತನಾಡಿದ ಶಾಸಕರು, ಹಳೆಯ ವಿದ್ಯಾರ್ಥಿಗಳ ಶ್ರಮದಿಂದ ಶಾಲೆಯ ಶತಮಾನೋತ್ಸವ ನಡೆಯುತ್ತಿದೆ. ಇದಕ್ಕೆ ಮೂಲ ಸೌಕರ್ಯ ಕಲ್ಪಿಸಿ ಕೊಡಲು ಮತ್ತು ಶತಮಾನೋತ್ಸವ ಆಚರಣೆಯ ನೆನಪಿನ ಕೊಡುಗೆಯಾಗಿ ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಲಕ್ಷಾಂತರ ಮಂದಿ ಓದಿ ಜ್ಞಾನ ಪಡೆದುಕೊಂಡ ಶಾಲೆಗೆ ಹಿಂದಿನ ವಿದ್ಯಾರ್ಥಿಗಳಿಂದ ಮತ್ತಷ್ಟು ಸಹಾಯ ದಾನ ದೊರೆತರೆ ಶಾಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಶಾಲೆ ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ, ಜಿ.ಪಂ. ಸದಸ್ಯೆ ಪಂಕಜ, ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಮೋಹನ್ ರಾಜ್, ಗ್ರಾ.ಪಂ. ಸದಸ್ಯ ಎನ್.ಎನ್. ಅನುಪ್, ವಿಜಯ, ಶತಮಾನೋತ್ಸವ ಸಮಿತಿ ಪ್ರಮುಖರಾದ ಪಾಲೆಂಗಡ ಮನು ನಂಜಪ್ಪ, ಚೆಪ್ಪುಡೀರ ಕಾರ್ಯಪ್ಪ, ಗಣೇಶ, ರವೀಂದ್ರ, ಪಿಲೋಮಿನ, ಶರಣುಪಿಳ್ಳೆ, ಬಾಚಮಾಡ ಕಮಲ, ಎಂ.ಎನ್. ಕೃಷ್ಣ, ಮನಿಯಪಂಡ ರಾಜೀವ್, ನವೀನ್, ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ, ವೀರಾಜಪೇಟೆ ಟೌನ್ ಬ್ಯಾಂಕ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ತಾಲೂಕು ಬಿಜೆಪಿ ವರ್ತಕರ ಪ್ರಕೋಷ್ಠ ಅಧ್ಯಕ್ಷ ಚೆಪ್ಪುಡೀರ ಮಾಚಯ್ಯ ಸೇರಿದಂತೆ ಅಧ್ಯಾಪಕರು ,ಇನ್ನಿತರರು ಹಾಜರಿದ್ದರು. -ಎನ್.ಎನ್. ದಿನೇಶ್