ಮಡಿಕೇರಿ, ಜ. 30: ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮೈಸೂರು -ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ ಅವರು ಉದ್ಘಾಟಿಸಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 32.37 ಲಕ್ಷ ರೂ ಅನುದಾನದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದ್ದು ಅದನ್ನು ಜನವರಿ, 26ರಂದು ಉದ್ಘಾಟಿಸಲಾಯಿತು.
ಉದ್ಘಾಟನ ಭಾಷಣ ಮಾಡಿದ ಸಂಸದ ಪ್ರತಾಪ ಸಿಂಹ ಅವರು ಶಿಕ್ಷಣದ ಮಹತ್ವವನ್ನು ಕುರಿತು ಮಾತನಾಡಿದರು. ಶಿಕ್ಷಣ ಎಲ್ಲಾ ಆಸ್ತಿಗಳಿಗಿಂತಲೂ ಮಿಗಿಲು ಅದನ್ನು ಯಾರು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮೆಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಮುಂತಾದವರು ಸರ್ಕಾರಿ ಶಾಲೆಯಲ್ಲಿಯೇ ಓದಿ ಸಾಧನೆ ಮಾಡಿರುವದು, ಹಾಗೆಯೇ ನೀವುಗಳು ಆಗಬೇಕು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ತಾ.ಪಂ. ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ ವಿದ್ಯೆಯ ಮಹತ್ವವನ್ನು ಮತ್ತು ವಿದ್ಯಾರ್ಥಿಗಳಲ್ಲಿ ಕಲಾ ಆಸಕ್ತಿಯನ್ನು ಮತ್ತು ಬರವಣಿಗೆಯ ಕೌಶಲ್ಯಗಳನ್ನು ವಿಸ್ತರಿಸುವದು ಶಿಕ್ಷಕರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಚೆಂಬು ಸುತ್ತ ಮುತ್ತಲಿನ ಗ್ರಾಮಸ್ಥರು ಸಹಕಾರ ಸಂಘಗಳ ಮೂಲಕವೇ ವ್ಯವಹರಿಸಿ ಹೆಚ್ಚಿನ ಲಾಭವನ್ನು ಪಡೆಯಬೇಕು ಎಂದು ಗ್ರಾಮದ ರೈತರಿಗೆ ಮನವಿ ಮಾಡಿಕೊಂಡರು. ದಿನೇಶ್ ಕುಮಾರ್ ಯು.ಕೆ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಚೆಂಬು ಇವರು ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಬೋಪಯ್ಯ ಕೆ.ಜಿ. ಅವರು ಕೇಂದ್ರ ಸರ್ಕಾರವು ಆರ್.ಎಂ.ಎಸ್.ಎ ಅಂತಹ ಅನೇಕ ಯೋಜನೆಗಳನ್ನು ರೂಪಿಸಿದ್ದು ಸಾಕಷ್ಟು ವೆಚ್ಚ ಮಾಡುತ್ತಾ ಬರುತ್ತಿದೆ ಇವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಸರ್ಕಾರಿ ಪ್ರೌಢಶಾಲೆ ಚೆಂಬು ಇವರು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡುತ್ತಾ ಬಂದಿರುವದು ಸಂತಸದ ಸಂಗತಿ ಎಂದರು. ಅಲ್ಲದೆ ಈ ಭಾಗದ ಜನರ ಎಲ್ಲಾ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಹಕಾರ ಹೀಗೆಯೇ ಇರುತ್ತದೆ ಎಂದು ಭರವಸೆ ನೀಡಿದರು.
ಚೆಂಬು ಗ್ರಾ.ಪಂ. ಉಪಾಧ್ಯಕೆÀ್ಷ ವನಿತಾ ವಿಜಯ, ಸದಸ್ಯರಾದ ರೇಖಾ ಬಿ.ಸಿ, ಚೆಂಬು ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ತೇಜೇಶ್ವರ ಪಿ.ಜಿ, ಮಡಿಕೇರಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಸುಬ್ರಮಣ್ಯ ಉಪಾಧ್ಯಾಯ, ಆರ್.ಎಂ.ಎಸ್.ಎ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬೆಟ್ಟನಾಯಕ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್ ಹಾಗೂ ಚೆಂಬು ಗ್ರಾ.ಪಂ. ಪಿ.ಡಿ.ಓ ಎಸ್.ಎಸ್ ಹೇಮಂತ್, ಸಂಪಾಜೆ ಲಯನ್ಸ್ ಕ್ಲಬ್ ಹಾಗೂ ಎಸ್.ಡಿ.ಎಂ.ಸಿ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕರಾದ ದೇಜಮ್ಮ ಅವರು ಪ್ರಾಸ್ತವಿಕ ನುಡಿಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಮಮತಾ. ವಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಜ್ಯೋತಿಶೆಟ್ಟಿ. ಕೆ ವಂದಿಸಿದರು.
ಇದೇ ದಿನ ಬೆಳಗ್ಗೆ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಯಶೋಧರ ಕಟ್ಟೆಮನೆ, ಹಾವಲ್ದಾರು ಭಾರತೀಯ ಸೇನೆ ಇವರು ಧ್ವಜಾರೋಹಣವನ್ನು ನೆರವೇರಿಸಿದರು. ಅಲ್ಲದೆ ಧ್ವಜಾರೋಹಣದ ತರುವಾಯ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು.