ಮಡಿಕೇರಿ, ಜ. 28: ಮಹಿಳೆಯರಲ್ಲಿರುವ ದೈವದತ್ತವಾದ ಶಕ್ತಿಯನ್ನು ಸಮರ್ಥವಾಗಿ ಬಳಸಿ ಕೊಂಡು ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಸಕ್ರಿಯರಾಗು ವಂತೆ ಇನ್ನರ್ ವೀಲ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಡಾ. ಸಾರಿಕಾ ಪ್ರಸಾದ್ ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಸಭಾಂಗಣದಲ್ಲಿ ಮಡಿಕೇರಿ ಇನ್ನರ್ ವೀಲ್ ಕ್ಲಬ್‍ಗೆ ಅಧಿಕೃತ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇನ್ನರ್ ವೀಲ್ ಜಿಲ್ಲೆ 318 ರ ಅಧ್ಯಕ್ಷೆ ಡಾ.ಸಾರಿಕಾ ಪ್ರಸಾದ್, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳತ್ತ ಮನಸ್ಸು ಮಾಡುತ್ತಿರುವ ಬೆಳವಣಿಗೆ ಸಮಾಜದಲ್ಲಿ ಕಂಡು ಬರುತ್ತಿದ್ದು, ದೈವದತ್ತವಾಗಿ ಒಲಿದಿರುವ ಶಕ್ತಿಯನ್ನು ಬಳಸಿಕೊಂಡು ಹೆಚ್ಚಿನ ರೀತಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗುವಂತೆ ಕರೆ ನೀಡಿದರು. ಕೊಡಗಿನ ಕೆಲವೆಡೆ ಪ್ರಕೃತ್ತಿ ವಿಕೋಪ ಸಂಭವಿಸಿದಾಗ ಮಡಿಕೇರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಸ್ವಉದ್ಯೋಗ ಕಲ್ಪಿಸಲು ನೆರವಾಗಿರು ವದು ಶ್ಲಾಘನೀಯವಾಗಿದ್ದು ಮಾನವೀಯತೆಗೆ ಮಡಿಕೇರಿ ಇನ್ನರ್ ವೀಲ್ ಆದ್ಯತೆ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ವಿಶ್ವದಾದ್ಯಂತ ಇನ್ನರ್ ವೀಲ್ ಅತೀ ದೊಡ್ಡ ಮಹಿಳಾ ಸದಸ್ಯೆ ಯರಿರುವ ಸಂಸ್ಥೆಯಾಗಿದ್ದು ಜಗತ್ತಿ ನಾದ್ಯಂತ 1.50 ಲಕ್ಷ ಸದಸ್ಯೆಯರಿದ್ದರೆ, ಭಾರತದಲ್ಲಿ 40 ಸಾವಿರ ಸದಸ್ಯೆಯರಿ ದ್ದಾರೆ. ಸಂತೋಷ, ಸೇವಾ ಮನೋಭಾವನೆಯೊಂದಿಗೆ ಗೆಳತಿ ಯರನ್ನೂ ಸಂಪಾದಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಪ್ರಮುಖ ಪಾತ್ರ ವಹಿಸಿದೆ, ಜತೆಗೆ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣವೂ ಇನ್ನರ್ ವೀಲ್ ಮೂಲಕ ಪ್ರಗತಿಯಾಗುತ್ತದೆ ಎಂದು ಹೇಳಿದ ಡಾ. ಸಾರಿಕಾ ಪ್ರಸಾದ್, ಜೀವನದಲ್ಲಿ ಎಲ್ಲರೂ ಮದರ್ ತೆರೇಸಾ ಆಗುವದು ಕಷ್ಟ, ಆದರೆ, ಅವರಂತೆ ಸಮಾಜಸೇವೆಯ ಮನೋಭಾವನೆ ಬೆಳೆಸಿಕೊಂಡು ಗುರಿಯತ್ತ ಹೆಜ್ಜೆಯಿಡುವದು ಕಷ್ಟವಲ್ಲ ಎಂದು ವ್ಯಾಖ್ಯಾನಿಸಿದರು.

ಮಡಿಕೇರಿ ಇನ್ನರ್ ವೀಲ್ 44 ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶ್ಲಾಘಿಸಿದರು.

ಇದೇ ಸಂದರ್ಭ ಭಾಗಮಂಡಲ ಕಾಲೇಜಿನಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ಉಪನ್ಯಾಸಕಿ ಗೀತಾಭಾವೆ, ಜೋಡುಪಾಲ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪಿ.ಪಿ. ದಮಯಂತಿ, ಕಾಟಕೇರಿ ಸರ್ಕಾರಿ ಶಾಲೆಯ ಶಿಕ್ಷಕಿ ಬಿ.ಕೆ. ಜಾನಕಿ, ಮಡಿಕೇರಿಯ ಮಹಿಳಾ ಹೋಂ ಗಾರ್ಡ್ ವಿಶಾಲಾಕ್ಷಿ ಅವರ ಸಾಧನೆಗಳಿಗಾಗಿ ಇನ್ನರ್ ವೀಲ್ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಣಕ್ಕಾಗಿ ಮಡಿಕೇರಿ ಕಾಲೇಜು ವಿದ್ಯಾರ್ಥಿನಿಯರಾದ ದೇವಮ್ಮ, ನೇತ್ರ ಅವರುಗಳಿಗೆ ಆರ್ಥಿಕ ನೆರವು ನೀಡಲಾಯಿತು. ಇನ್ನರ್ ವೀಲ್ ವಾರ್ತಾ ಪತ್ರವನ್ನು ರೋಟರಿ ಕ್ಲಬ್ ಹಿರಿಯ ಸದಸ್ಯ ಅನಂತಸುಬ್ಬರಾವ್ ಬಿಡುಗಡೆಗೊಳಿಸಿದರು.

ಮಡಿಕೇರಿ ಇನ್ನರ್ ವೀಲ್‍ಗೆ ನೂತನ ಸದಸ್ಯೆಯಾಗಿ ಡಾ. ದೀಪಾ ಅವರನ್ನು ಸೇರ್ಪಡೆಗೊಳಿಸಲಾ ಯಿತು. ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲತಾಚಂಗಪ್ಪ, ಕಾರ್ಯದರ್ಶಿ ಕಣ್ಣೂ ದೇವರಾಜ್, ಕಳೆದ ಸಾಲಿನ ಅಧ್ಯಕ್ಷೆ ನಮಿತಾ ರೈ ವೇದಿಕೆಯಲ್ಲಿದ್ದರು.

ಗೌರಿ ಪ್ರಸಾದ್ ಪ್ರಾರ್ಥಿಸಿ, ಡಾ.ಶುಭಾ ರಾಜೇಶ್, ನಿಶಾ ಮೋಹನ್, ವಿಜಯಲಕ್ಷ್ಮಿ ಚೇತನ್, ಶಫಾಲಿ ರೈ, ಶಮ್ಮಿಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷೆ ಆಗ್ನೇಸ್ ಮುತ್ತಣ್ಣ ವಂದಿಸಿದರು.

ಇದೇ ಸಂದರ್ಭ ಆರ್ಯ ರಾಜೇಶ್, ಶಮಿಕ್ ರೈ, ಅಪೇಕ್ಷಾ ರೈ, ಸಿಂಚನಾ ವಿನೋದ್ ಅವರಿಂದ ಹಾಡು, ನೃತ್ಯ ಕಾರ್ಯಕ್ರಮ ಮತ್ತು ಇನ್ನರ್ ವೀಲ್ ಸದಸ್ಯೆಯರಾದ ರೂಪಾಸುಮಂತ್, ಶಫಾಲಿ ರೈ, ನಮಿತಾ ರೈ, ಶಮ್ಮಿ ಪ್ರಭು, ಪ್ರಿಯ ಜಗದೀಶ್ ಅವರಿಂದ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.