ಮಡಿಕೇರಿ, ಜ.28: ಯುವಕ ಯುವತಿಯರಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯ ತರಬೇತಿಯನ್ನು ನೀಡುತ್ತಿರುವ ನೆಹರು ಯುವ ಕೇಂದ್ರದ ಕೆಲಸ ಅತ್ಯಂತ ಶ್ಲಾಘನೀಯ ಎಂದು ನಗರಸಭಾ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಹೇಳಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾ ತರಬೇತಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಂತೋಷ್ ಯುವಕ ಸಂಘ, ಜಿಲ್ಲಾ ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆಯು ದುಷ್ಚಟಕ್ಕೆ ಬಲಿಯಾಗದೆ ತಂದೆ-ತಾಯಂದಿರಿಗೆ ಆಸರೆಯಾಗಿ ಸ್ವಾವಲಂಬಿ ಜೀವನ ನಡಸುವಂತೆ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಜಿಲ್ಲಾ ತರಬೇತಿ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಪುಟ್ಟಪ್ಪ ಮಾತನಾಡಿ ನೆಹರು ಯುವ ಕೇಂದ್ರದ ಯುವಕ ಯುವತಿಯರಿಗೆ ಸ್ವಾವಲಂಬಿ ಜೀವನ ನಡೆಸಲು ಉತ್ತಮ ಅವಕಾಶವನ್ನು ದೊರಕಿಸಿ ಕೊಡುತ್ತಿದ್ದು, ದೇಶದ ಸಮಗ್ರತೆ, ಏಕತೆ ಸಾಧಿಸುವಲ್ಲಿ ನೆಹರು ಯುವ ಕೇಂದ್ರದ ಪಾತ್ರ ಮಹತ್ತರ ಎಂದು ಅಭಿಪ್ರಾಯಪಟ್ಟರು.
ನೆಹರು ಯುವ ಕೇಂದ್ರವು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿಕೊಟ್ಟಿರುವದು ಹೆಮ್ಮೆಯ ವಿಚಾರವಾಗಿದು,್ದ ಈ ಶಿಬಿರದಲ್ಲಿ ನೀಡುತ್ತಿರುವ ತರಬೇತಿಯಿಂದ ಯುವಕರಿಗೆ ಹೆಚ್ಚಿನ ಅವಕಾಶಗಳು ರೂಪಿಸಲಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಹಲವು ಇಲಾಖೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಸುತ್ತಮುತ್ತಲಿನ ಪ್ರದೇಶದ ಜನರ ಅಭಿವೃದ್ಧಿಗೆ ಶ್ರಮಿಸಲು ಯುವಕ ಯುವತಿಯರಿಗೆ ಸಲಹೆ ನೀಡಿದರು.
ನೆಹರು ಯುವ ಕೇಂದ್ರದ ಉಸ್ತುವಾರಿಗಳಾದ ಪ್ರಾನ್ಸಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕ ಯುವತಿಯರನ್ನು ಒಗ್ಗೂಡಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನೆಹರು ಯುವ ಕೇಂದ್ರದಲ್ಲಿ ಇರುವಂತಹ ಆರ್ಥಿಕ ಸಂಪನ್ಮೂಲದಲ್ಲಿ ಹಲವು ವಿಶಿಷ್ಟ ರೀತಿಯ ತರಬೇತಿಗಳನ್ನು ಯುವಕ ಯುವತಿಯರಿಗೆ ನೀಡಿ ಅವರನ್ನು ಸ್ವಾವಲಂಬಿ ಜೀವನ ನಡೆಸುವಂತಾಗಲು ಎಲ್ಲಾ ರೀತಿಯ ನೆರವು ನೀಡುತ್ತಿದೆ. ವಿವಿಧ ಸರ್ಕಾರಿ ಸವಲತ್ತುಗಳನ್ನು ಯುವ ಜನತೆ ಪಡೆಯುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಾಗಾರ ಸಹಕಾರಿಯಾಗಿದೆ, ಜನ ಸಾಮಾನ್ಯರಿಗೆ ಎಲ್ಲಾ ರೀತಿಯ ಸವಲತ್ತು ಸಮನ್ವಯತೆ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನೆಹರು ಯುವ ಕೇಂದ್ರದಲ್ಲಿ ತರಬೇತಿ ಪಡೆದ ಯುವಕ ಗಣೇಶ್ ಹಲವರನ್ನು ರಕ್ಷಿಸಿದ ಕಾರಣಕ್ಕಾಗಿ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ರಾಷ್ಟ್ರೀಯ ಸೇವಾ ಕಾರ್ಯಕರ್ತ ಎಂ.ಬಿ.ವಿವೇಕ್, ಲೆಕ್ಕಾಧಿಕಾರಿ ಮಹೇಶ್ ಜಿಲ್ಲೆಯ ವಿವಿಧ ಯುವಕ ಮಂಡಲದ ಸದಸ್ಯರು, ಇತರರು ಇದ್ದರು.