ನಾಪೋಕ್ಲು, ಜ.28: ನರಿಯಂದಡ ಗ್ರಾಮ ಪಂಚಾಯ್ತಿಗೆ ಒಳಪಡುವ ಕೋಕೇರಿ- ಕೊಳಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೆ ಆಗ್ರಹಿಸಿ ಕೋಕೇರಿ- ಕೊಳಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೈಂತ್ ಮೈಲ್‍ನಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 13 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ವಾಹನಗಳಲ್ಲಿ ಮಾತ್ರವಲ್ಲದೇ, ಕಾಲ್ನಡಿಗೆಯಲ್ಲೂ ಸಂಚರಿಸಲಾಗದ ದುಸ್ಥಿತಿಯಲ್ಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರಸ್ತೆ ತಡೆ ನಡೆಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ಚೇನಂಡ ಗಿರೀಶ್ ಪೂಣಚ್ಚ, ಚೇನಂಡ ದಿನಾ ಚಂಗಪ್ಪ, ಚೇನಂಡ ಶಿವಾಜಿ ಸೋಮಯ್ಯ, ರಸ್ತೆ ಹದಗೆಟ್ಟ್ಟಿರುವ ಬಗ್ಗೆ ಹಲವಾರು ಬಾರಿ ಜಿಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆಯಲಾಗಿದ್ದರೂ ಇದುವರೆಗೆ ಈ ಬಗ್ಗೆ ಗಮನ ಹರಿಸಿಲ್ಲ. ಕೋಕೇರಿ, ಕೊಳಕೇರಿ ಗ್ರಾಮದಲ್ಲಿ ಅಂದಾಜು 500 ಕ್ಕೂ ಹೆಚ್ಚು ವಾಹನಗಳಿದ್ದು, ದಿನಂಪ್ರತಿ 200ಕ್ಕೂ ಹೆಚ್ಚಿನ ವಾಹನಗಳು, ನಾಲ್ಕೈದು ಶಾಲಾ ಕಾಲೇಜು ಬಸ್‍ಗಳು ತೀರಾ ಕಷ್ಟದಲ್ಲಿ ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‍ನ್ನು ರಸ್ತೆ ದುಸ್ಥಿತಿಯ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಗ್ರಾಮದಲ್ಲಿರುವ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರು ಕೂಡ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಪಡಿಸದಿದ್ದಲ್ಲಿ ಮಡಿಕೇರಿ ಮತ್ತು ವೀರಾಜಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಡೆಯೊಡ್ಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳುವದರೊಂದಿಗೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ.ಸದಸ್ಯ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ ಹಾಗೂ ತಾ.ಪಂ.ಸದಸ್ಯೆ ಉಮಾಪ್ರಭು ಪ್ರತಿಭಟನಾನಿರತರ ಅಹವಾಲನ್ನು ಆಲಿಸಿದ ಬಳಿಕ ಮಾತನಾಡಿ, ರಸ್ತೆ ಸಮಸ್ಯೆ ಕುರಿತಂತೆ ಫೆ. 2ರಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರ ಉಪಸ್ಥಿತಿಯಲ್ಲಿ ಕೋಕೇರಿ ಶಾಲೆಯಲ್ಲಿ ಗ್ರಾಮಸ್ಥರೊಂದಿಗೆ ಸಭೆಯನ್ನು ಆಯೋಜಿಸುವ ಮೂಲಕ ಕ್ರಮಕೈಗೊಳ್ಳಲಾಗುವದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪೊನ್ನಚಂಡ ಮಾದಪ್ಪ, ಕುಮ್ಮಾಂಡ ನಂದಾ ಕಾಳಪ್ಪ, ಕುಮ್ಮಾಂಡ ನಾಣಯ್ಯ, ಚೇನಂಡ ಕಲ್ಪನಾ ಮಾದಪ್ಪ, ಪೆಮ್ಮಂಡ ಕಾವೇರಮ್ಮ, ಬಿದ್ದಂಡ ರಾಜೇಶ್, ಕಿಕ್ಕರೆ ಮುಹಮ್ಮದ್, ಕಿಕ್ಕರೆ ಉಸ್ಮಾನ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
-ದುಗ್ಗಳ