ಸೋಮವಾರಪೇಟೆ, ಜ.28: ಸಂಸ್ಕಾರದೊಂದಿಗೆ ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಶಿಕ್ಷಣ ಮಾತ್ರ ಮೌಲ್ಯಯುತವಾದುದು. ಅಂತಹ ಶಿಕ್ಷಣ ಇಂದಿನ ಅಗತ್ಯತೆಯಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಿಸಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಣ ಪಡೆಯುವದು ಮಾತ್ರ ಮುಖ್ಯವಲ್ಲ; ಸಂಸ್ಕಾರ, ಜೀವನ ಮೌಲ್ಯ ಕಲಿಯಬೇಕು. ಶಿಕ್ಷಣ ಸಮಾಜಮುಖಿಯಾಗದ ಹೊರತು ಅದಕ್ಕೆ ಮೌಲ್ಯ ಬರುವದಿಲ್ಲ. ಸಮಾಜದಲ್ಲಿ ಸ್ವಾವಲಂಬನೆ ತುಂಬುವ ಶಿಕ್ಷಣ ಇಂದಿನ ಅವಶ್ಯಕತೆ ಎಂದು ಸ್ವಾಮೀಜಿ ಹೇಳಿದರು.

ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ಸುಖೀ ಸಮಾಜ ನಿರ್ಮಾಣ ಸಾಧ್ಯ. ಬಾಹ್ಯ ಆಲೋಚನೆಗಳನ್ನೂ ಒಳಗೊಂಡಂತೆ ನಮ್ಮ ವ್ಯಕ್ತಿತ್ವವನ್ನು ನಾವುಗಳೇ ನಿರ್ಮಿಸಿಕೊಳ್ಳಬೇಕು. ನಮ್ಮನ್ನು ನಾವೇ ಮೊದಲು ಅರ್ಥೈಸಿಕೊಳ್ಳಬೇಕು ಎಂದ ಅವರು, ಇಂತಹ ಜೀವನ ಕ್ರಮದಿಂದಲೇ ಸಂತರು ಬದುಕಿನಲ್ಲಿ ಚಿರಸ್ಥಾಯಿಯಾದರು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಜೀವನ ಕ್ರಮ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ವಿಶ್ವಕ್ಕೆ ಸಹೋದರತೆಯ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಿದ್ದು, ದೇಶ ಭಕ್ತಿಯ ಪ್ರೇರಣೆಯಾಗಿದೆ ಎಂದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ದೇಶಭಕ್ತಿಯನ್ನು ಮೈಗೂಡಿಸಿ ಕೊಳ್ಳಬೇಕು. ವಿವೇಕಾನಂದ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಎಂದು ರಂಜನ್ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ವಿವೇಕಾನಂದರ ವಿಚಾರಧಾರೆಗಳು ಜಗತ್ತಿಗೆ ಮಾರ್ಗದರ್ಶಕವಾಗಿವೆ. ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಲು ಶ್ರಮಿಸಿದ ಅಪ್ರತಿಮ ದೇಶಭಕ್ತ ವಿವೇಕಾನಂದರು, ತಮ್ಮ ವ್ಯಕ್ತಿತ್ವದ ಮೂಲಕ ಜಗತ್ತಿನ ಗಮನ ಸೆಳೆದ ಶ್ರೇಷ್ಠ ಸಂತ ಎಂದು ಬಣ್ಣಿಸಿದರು.

ಭಾರತದ ಗತ ವೈಭವವನ್ನು ಸಾಕ್ಷೀಕರಿಸಿದ ವಿವೇಕಾನಂದರ ಆಶಯಗಳನ್ನು ಸಾಕಾರಗೊಳಿಸುವ ಕಾರ್ಯ ಆಗಬೇಕು. ವಿದ್ಯಾರ್ಥಿಗಳು ಕಲಿಯುವ ವಿದ್ಯೆ ರಾಷ್ಟ್ರಕಾರ್ಯಕ್ಕೆ ಪ್ರೇರಣೆಯಾಗಬೇಕು. ಆತ್ಮವಿಶ್ವಾಸವನ್ನು ಮೂಡಿಸಿಕೊಳ್ಳುವ ಮೂಲಕ ದೇಶನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರಲ್ಲದೆ, ವಿವೇಕಾನಂದರ ಜೀವನದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ್ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ, ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ ಅವರುಗಳು ಉಪಸ್ಥಿತರಿದ್ದರು.

ವಿವೇಕಾನಂದ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.